ಹುಬ್ಬಳ್ಳಿ: ಮೋದಿಗೆ ಹಾರಹಾಕಲು ಓಡಿದ 10ರ ಬಾಲಕ, ಭದ್ರತಾ ಲೋಪ?
ಬಾಲಕನ ಸಾಹಸ ನೋಡಿ ಸ್ವತಃ ಪ್ರಧಾನಿಗಳೇ ಕಾರಿನಿಂದಲೇ ಹಾರ ಸ್ವೀಕರಿಸಿ, ಅಂಗರಕ್ಷಕರ ಮೂಲಕ ಅದನ್ನು ಕಾರಿಗೆ ಹಾಕಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹುಬ್ಬಳ್ಳಿ(ಜ.13): ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ವೇಳೆ 10 ವರ್ಷದ ಬಾಲಕನೊಬ್ಬ ಗೋಕುಲ ರಸ್ತೆಯ ವಾಯವ್ಯ ಸಾರಿಗೆ ಸಂಸ್ಥೆಯ ಕ್ವಾರ್ಟಸ್ ಮುಂಭಾಗದಲ್ಲಿ ಭದ್ರತಾ ಬ್ಯಾರಿಕೇಡ್‌ನಿಂದ ಜಿಗಿದು ಮೋದಿಗೆ ಹಾರ ಹಾಕಲು ತೆರಳಿದ ಘಟನೆ ನಡೆಯಿತು.
ಇದೇ ವೇಳೆ ಸ್ಥಳದಲ್ಲಿದ್ದ ಎಸ್‌ಪಿಜಿ ಬಾಲಕನನ್ನು ತಡೆದರು. ಇಷ್ಟಾಗಿಯೂ ಬಾಲಕನ ಸಾಹಸ ನೋಡಿ ಸ್ವತಃ ಪ್ರಧಾನಿಗಳೇ ಕಾರಿನಿಂದಲೇ ಹಾರ ಸ್ವೀಕರಿಸಿ, ಅಂಗರಕ್ಷಕರ ಮೂಲಕ ಅದನ್ನು ಕಾರಿಗೆ ಹಾಕಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕನನ್ನು ಹುಬ್ಬಳ್ಳಿಯ ತೊರವಿಹಕ್ಕಲದ ಕುನಾಲ್ ಸುರೇಶ ಎಂದು ಗುರುತಿಸಲಾಗಿದೆ. ಆದರೆ, ಈ ಘಟನೆಯಿಂದಾಗಿ ಪ್ರಧಾನಿ ಅವರ ಭದ್ರತೆಯಲ್ಲಿ ಲೋಪ ಕಂಡುಬಂದಿದೆ ಎನ್ನುವ ಮಾತೂ ಕೇಳಿ ಬರುತ್ತಿದೆ.
ಹುಬ್ಬಳ್ಳಿಯಲ್ಲಿ ಮೋದಿ ಸುನಾಮಿ, ಭರ್ಜರಿ ರೋಡ್ ಶೋ!
ಭದ್ರತಾ ಲೋಪವಾಗಿಲ್ಲ:
ಲಕ್ಷಾಂತರ ಜನರು ಸೇರಿದ್ದರು. ಇಂತಹ ಸಂದರ್ಭದಲ್ಲಿ ಬ್ಯಾರಿಕೇಡ್ ಹಾರಿ, ಬಾಲಕ ಅತಿ ಉತ್ಸಾಹದಿಂದ ಈ ರೀತಿ ಮಾಡಿದ್ದಾನೆ. ಈ ವೇಳೆ ಯಾವುದೇ ಭದ್ರತಾ ಲೋಪವಾಗಿಲ್ಲ, ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರಮನ್ ಗುಪ್ತಾ ಹೇಳಿದರು.