ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ (UBL) ಕರ್ನಾಟಕದ ಆರ್ಥಿಕತೆಗೆ ₹4,500 ಕೋಟಿ ಕೊಡುಗೆ ನೀಡಿದ್ದು, 36,400 ಉದ್ಯೋಗಗಳನ್ನು ಸೃಷ್ಟಿಸಿದೆ. 2024-25ನೇ ಸಾಲಿನಲ್ಲಿ ರಾಜ್ಯ ಸರ್ಕಾರಕ್ಕೆ ₹3,100 ಕೋಟಿ ತೆರಿಗೆ ಪಾವತಿಸುವ ಮೂಲಕ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಅಲ್ಲದೆ, ಸ್ಥಳೀಯ ರೈತರು ಮತ್ತು ಪೂರೈಕೆದಾರರಿಗೆ ಆದ್ಯತೆ ನೀಡಿ ಸಾಮಾಜಿಕ ಜವಾಬ್ದಾರಿಯನ್ನೂ ಮೆರೆದಿದೆ.
ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಜಾಗತಿಕ ಹೈನೆಕನ್ (Heineken) ಸಮೂಹದ ಭಾಗವಾಗಿರುವ ಬೆಂಗಳೂರು ಮೂಲದ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ (UBL), ಕರ್ನಾಟಕದ ಆರ್ಥಿಕ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ ಎಂಬ ಅಂಶ ನೂತನ ಅಧ್ಯಯನ ವರದಿಯಿಂದ ಬಹಿರಂಗವಾಗಿದೆ.
ಸ್ವತಂತ್ರ ಸಂಸ್ಥೆಯಾದ 'ಸ್ಟಿವಾರ್ಡ್ ರೆಡ್‌ಕ್ವೀನ್' ಸಿದ್ಧಪಡಿಸಿರುವ ಕರ್ನಾಟಕ ರಾಜ್ಯ ಸಾಮಾಜಿಕ-ಆರ್ಥಿಕ ಪರಿಣಾಮ ಮೌಲ್ಯಮಾಪನ (SEIA) ವರದಿಯನ್ನು ಯುಬಿಎಲ್ ಮಂಗಳವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, 2024-25ರ ಆರ್ಥಿಕ ವರ್ಷದಲ್ಲಿ ಯುಬಿಎಲ್ ಸಂಸ್ಥೆಯು ತನ್ನ ವ್ಯಾಪಕ ಪೂರೈಕೆ ಸರಪಳಿಯ ಮೂಲಕ ರಾಜ್ಯದ ಆರ್ಥಿಕತೆಗೆ ₹4,500 ಕೋಟಿ ಮೌಲ್ಯದ ಮೌಲ್ಯವರ್ಧಿತ ಕೊಡುಗೆ ನೀಡಿದ್ದು, ಒಟ್ಟು 36,400 ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.
ರಾಜ್ಯ ಜಿಡಿಪಿಗೆ 0.2% ಕೊಡುಗೆ:
ಉತ್ಪಾದನೆ, ಕಚ್ಚಾವಸ್ತುಗಳ ಖರೀದಿ, ವಿತರಣೆ, ಚಿಲ್ಲರೆ ವ್ಯಾಪಾರ ಹಾಗೂ ಹೋಟೆಲ್/ಪಬ್ ಉದ್ಯಮಗಳನ್ನೊಳಗೊಂಡ ತನ್ನ ಸಮಗ್ರ ಕಾರ್ಯಾಚರಣೆಯ ಮೂಲಕ ಯುಬಿಎಲ್ ಸಂಸ್ಥೆಯು ರಾಜ್ಯದ ಆರ್ಥಿಕತೆಗೆ ₹4,500 ಕೋಟಿ ಕೊಡುಗೆ ನೀಡಿದೆ. ಇದು ಕರ್ನಾಟಕದ ಒಟ್ಟು ಆಂತರಿಕ ಉತ್ಪನ್ನದ (GDP) ಶೇಕಡಾ 0.2 ರಷ್ಟಾಗಿದೆ.
ಸಮರ್ಥ ಉದ್ಯೋಗ ಸೃಷ್ಟಿ ನಿಯಮ:
ಯುಬಿಎಲ್ ಪ್ರಸ್ತುತ 1,453 ಜನರಿಗೆ ನೇರ ಉದ್ಯೋಗ ನೀಡಿದೆ. ಇದರ ಜೊತೆಗೆ, ಸರಬರಾಜುದಾರರು, ವಿತರಕರು ಹಾಗೂ ಮಾರಾಟಗಾರರನ್ನು ಒಳಗೊಂಡಂತೆ ಸುಮಾರು 34,900 ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಅಂದರೆ, ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ನೇರ ಉದ್ಯೋಗಿಯೂ ರಾಜ್ಯಾದ್ಯಂತ 24 ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಪ್ರೇರಕನಾಗಿದ್ದಾನೆ.
ಸ್ಥಳೀಯ ಪೂರೈಕೆದಾರರು ಮತ್ತು ರೈತರಿಗೆ ಆದ್ಯತೆ:
ಸ್ಥಳೀಯ ಮೂಲಸೌಕರ್ಯ ಹಾಗೂ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, 2024-25ರಲ್ಲಿ ಯುಬಿಎಲ್ ಕರ್ನಾಟಕದ ಸ್ಥಳೀಯ ಸರಬರಾಜುದಾರರಿಂದ ₹300 ಕೋಟಿ ಮೌಲ್ಯದ ಸರಕು ಮತ್ತು ಸೇವೆಗಳನ್ನು ಖರೀದಿಸಿದೆ. ಇದರಲ್ಲಿ ಸಕ್ಕರೆ, ಗಾಜಿನ ಬಾಟಲಿಗಳು, ಕಾರ್ಟನ್‌ಗಳು, ಯಂತ್ರೋಪಕರಣಗಳು, ಲೇಬಲ್‌ಗಳು ಮತ್ತು ಸಾರಿಗೆ ಸೇವೆಗಳು ಪ್ರಮುಖವಾಗಿವೆ.
ಸರ್ಕಾರದ ಬೊಕ್ಕಸಕ್ಕೆ ₹3,100 ಕೋಟಿ ತೆರಿಗೆ:
2024-25ರಲ್ಲಿ ಸಂಸ್ಥೆಯ ವಹಿವಾಟಿನಿಂದ ರಾಜ್ಯ ಸರ್ಕಾರಕ್ಕೆ ಅಂದಾಜು ₹3,100 ಕೋಟಿ ತೆರಿಗೆ ಆದಾಯ ಹರಿದುಬಂದಿದೆ. ಇದು ಕರ್ನಾಟಕ ಸರ್ಕಾರದ ಒಟ್ಟು ತೆರಿಗೆ ಆದಾಯದ ಶೇಕಡಾ 1.7 ರಷ್ಟಾಗಿದೆ. ವರದಿಯ ಪ್ರಕಾರ, ಗ್ರಾಹಕರು ಯುಬಿಎಲ್ ಪಾನೀಯಗಳಿಗೆ ಖರ್ಚು ಮಾಡುವ ಪ್ರತಿಯೊಂದು ರೂಪಾಯಿಯಲ್ಲಿ 53 ಪೈಸೆ ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ತೆರಿಗೆಯಾಗಿ ತಲುಪುತ್ತದೆ. 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯವೊಂದರಲ್ಲೇ ಯುಬಿಎಲ್ ಸಂಸ್ಥೆಯ ಒಟ್ಟು 21 ಮಿಲಿಯನ್ (2.1 ಕೋಟಿ) ಕೇಸ್ ಪಾನೀಯಗಳು ಮಾರಾಟವಾಗಿವೆ.
'ಬಿಯರ್ ಕ್ಯಾಪಿಟಲ್ ಆಫ್ ಇಂಡಿಯಾ' – ಯುಬಿಎಲ್ ಕಟಿಬದ್ಧತೆ
ವರದಿಯ ಕುರಿತು ಹರ್ಷ ವ್ಯಕ್ತಪಡಿಸಿ ಮಾತನಾಡಿದ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ (MD) ಹಾಗೂ ಸಿಇಒ ವಿವೇಕ್ ಗುಪ್ತಾ, ಕರ್ನಾಟಕವು ನಮ್ಮ ಉದ್ಯಮದ ಪ್ರಮುಖ ಮಾರುಕಟ್ಟೆಯಷ್ಟೇ ಅಲ್ಲ, ನಮ್ಮ ಕಂಪನಿಯ ಪ್ರಧಾನ ಕಚೇರಿಯಿರುವ ಹೆಮ್ಮೆಯ ತಾಣವಾಗಿದೆ. ಬೆಂಗಳೂರನ್ನು ಜಾಗತಿಕವಾಗಿ ಬಿಯರ್ ಕ್ಯಾಪಿಟಲ್ ಆಫ್ ಇಂಡಿಯಾ ಎಂದೇ ಗುರುತಿಸಲಾಗುತ್ತದೆ. ರಾಜ್ಯ ಸರ್ಕಾರದ ಪ್ರಗತಿಪರ ನೀತಿಗಳು ಹಾಗೂ ಮದ್ಯಪಾನ ಆಧಾರಿತ ತೆರಿಗೆ ವ್ಯವಸ್ಥೆಯು ನಮ್ಮ ಬೆಂಬಲಕ್ಕೆ ನಿಂತಿವೆ. ಈ ವರದಿಯು ಸ್ಥಳೀಯ ಉದ್ಯೋಗ ಸೃಷ್ಟಿ, ರೈತರು ಮತ್ತು ಸರಬರಾಜುದಾರರ ಸಬಲೀಕರಣದಲ್ಲಿ ನಮ್ಮ ಪಾತ್ರವನ್ನು ಸ್ಪಷ್ಟಪಡಿಸುತ್ತದೆ. ಮುಂದೆಯೂ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಬೆಂಬಲ ನಿರಂತರವಾಗಿರಲಿದೆ. ಎಂದರು
ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರೀಯ ಕೊಡುಗೆ
ವಾಣಿಜ್ಯ ವಹಿವಾಟಿನ ಜೊತೆಗೆ, ಯುಬಿಎಲ್ ತನ್ನ 'ಬ್ರೂ ಎ ಬೆಟರ್ ಇಂಡಿಯಾ' (Brew a Better India) ಅಭಿಯಾನದ ಅಡಿಯಲ್ಲಿ ಜಲ ಸಂರಕ್ಷಣೆ, ಸಮುದಾಯ ಅಭಿವೃದ್ಧಿ, ಮಹಿಳಾ ಸಬಲೀಕರಣ ಹಾಗೂ ಜವಾಬ್ದಾರಿಯುತ ಮದ್ಯಪಾನ ಜಾಗೃತಿ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ದೇಶದ ಆರ್ಥಿಕತೆಗೆ ₹43,000 ಕೋಟಿ ಕೊಡುಗೆ:
ರಾಷ್ಟ್ರೀಯ ಮಟ್ಟದಲ್ಲೂ ಯುಬಿಎಲ್ ದೃಢ ಹೆಜ್ಜೆ ಗುರುತು ಮೂಡಿಸಿದೆ. 2024-25ರಲ್ಲಿ ಭಾರತದಾದ್ಯಂತ 2.95 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವ ಸಂಸ್ಥೆಯು, ದೇಶದ ಒಟ್ಟು ಆರ್ಥಿಕತೆಗೆ ₹43,000 ಕೋಟಿ ಕೊಡುಗೆ ನೀಡಿದೆ ಹಾಗೂ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳಿಗೆ ಒಟ್ಟು ₹30,600 ಕೋಟಿ ತೆರಿಗೆ ಪಾವತಿಸಿದೆ.
ಪ್ರಸಿದ್ಧ 'ಕಿಂಗ್‌ಫಿಷರ್' ಬ್ರ್ಯಾಂಡ್‌ನ ವಿವಿಧ ಬಿಯರ್‌ಗಳು, ಪ್ಯಾಕೇಜ್ಡ್ ಕುಡಿಯುವ ನೀರು ಮತ್ತು ಸೋಡಾಗಳನ್ನು ಉತ್ಪಾದಿಸುವ ಯುಬಿಎಲ್, ಭಾರತೀಯ ಮಾರುಕಟ್ಟೆಯಲ್ಲಿ ಹೈನೆಕನ್ (Heineken) ಮತ್ತು ಆಮ್‌ಸ್ಟೆಲ್ (Amstel) ಬ್ರ್ಯಾಂಡ್‌ಗಳ ವಿತರಣೆ ಹಾಗೂ ಮಾರುಕಟ್ಟೆಯ ಜವಾಬ್ದಾರಿಯನ್ನೂ ಹೊಂದಿಕೊಂಡಿದೆ.


