Agnipath ಅಗ್ನಿವೀರರಿಗೆ ಕರ್ನಾಟಕ ಸರ್ಕಾರದಿಂದಲೂ ಬಂಪರ್ ಆಫರ್
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ ರಾಜ್ಯ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಹತ್ವದ ಘೋಷಣೆ ಮಾಡಿದ್ದಾರೆ.
ಉಡುಪಿ, (ಜೂನ್.22): ಕೇಂದ್ರ ಸರಕಾರ ಮಹತ್ವಾಕಾಂಕ್ಷೆಯೊಂದಿಗೆ ಆರಂಭಿಸುತ್ತಿರುವ ಅಗ್ನಿಪಥ ಯೋಜನೆಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ನಾಲ್ಕು ವರ್ಷ ತರಬೇತಿ ಪೂರೈಸಿದ ಯುವಕರ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಅವರಿಗೆ ಸಿಗಬಹುದಾದ ಉದ್ಯೋಗಾವಕಾಶಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ಈ ನಡುವೆ ರಾಜ್ಯ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಹತ್ವದ ಘೋಷಣೆ ಮಾಡಿದ್ದಾರೆ. ಅಗ್ನಿ ವೀರರಿಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಉದ್ಯೋಗ ಮೀಸಲಾತಿ ನೀಡುವ ಬಗ್ಗೆ ಕಾರ್ಯಕ್ರಮ ರೂಪಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಅಗ್ನಿಪಥ ಯೋಜನೆಯ ಬೆಂಬಲಕ್ಕೆ ರಾಜ್ಯಸರಕಾರದ ಒತ್ತಾಸೆ ಇದೆ ಎಂಬುದನ್ನು ಪ್ರಕಟಿಸಿದ್ದಾರೆ.
Agnipath Scheme; ಜೂನ್ 24 ರಂದು ನೇಮಕಾತಿಗೆ ಅಧಿಸೂಚನೆ , ಜುಲೈ 24 ರಂದು ಪರೀಕ್ಷೆ
ಈ ಕುರಿತು ಉಡುಪಿಯಲ್ಲಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಅಗ್ನಿ ಪಥಕ್ಕೆ ಅಗ್ನಿ ಕೊಡುವವರು ಗಲಾಟೆ ಆರಂಭಿಸಿದ್ದಾರೆ. ಆದರೆ ದೇಶದಲ್ಲಿ ಹೊಸ ಅಗ್ನಿ ವೀರರು ಕೂಡ ಸೃಷ್ಟಿಯಾಗುತ್ತಿದ್ದಾರೆ. ಅಗ್ನಿಪಥ ಯೋಜನೆಯಲ್ಲಿ ನಾಲ್ಕು ವರ್ಷಗಳ ತರಬೇತಿ ನೀಡಲಾಗುತ್ತದೆ. ಈ ಮಿಲಿಟರಿ ತರಬೇತಿಯ ನಂತರ ಮುಂದೇನು ಅನ್ನೋ ಪ್ರಶ್ನೆ ಕೇಳಿಬರುತ್ತಿದೆ. ಈ ಪ್ರಶ್ನೆಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ನಾವು ಮಹತ್ವದ ಯೋಜನೆಯನ್ನು ತರುತ್ತೇವೆ ಎಂದು ಹೇಳಿದ್ದಾರೆ.
ಅಗ್ನಿವೀರರಿಗೆ ಮೀಸಲಾತಿ
ಅಗ್ನಿ ವೀರರಿಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಮೀಸಲಾತಿ ನೀಡುವ ಬಗ್ಗೆ ಯೋಜನೆ ರೂಪಿಸುತ್ತೇವೆ.ಅಗ್ನಿ ವೀರರಿಗೆ ದೈಹಿಕ ಶಿಕ್ಷಕ ಹುದ್ದೆ ನೀಡಲು ಚಿಂತನೆಯಿದ್ದು, ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಸರ್ಕಾರಕ್ಕೆ ಟಿಪ್ಪಣಿ ಕೊಟ್ಟಿದ್ದೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಾಲ್ಕು ವರ್ಷ ತರಬೇತಿ ಪೂರೈಸಿದ ಅಗ್ನಿ ವೀರರಿಗೆ ನಮ್ಮ ಇಲಾಖೆಯಲ್ಲಿ ಶೇಕಡ 75ರಷ್ಟು ಮೀಸಲಿಡುವ ಯೋಚನೆ ಇದೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ವಸತಿ ಶಾಲೆಯಲ್ಲಿ ಮೀಸಲಾತಿಗೆ ಚಿಂತನೆ ನಡೆಸಿದ್ದೇವೆ. ಕೇವಲ ದೈಹಿಕ ಶಿಕ್ಷಕ ಹುದ್ದೆ ಮಾತ್ರವಲ್ಲದೆ,ಇತರ ಹುದ್ದೆಗಳಲ್ಲೂ ಆದ್ಯತೆ ನೀಡುವ ಚಿಂತನೆ ಇದೆ.ಈ ಕುರಿತ ಕಡತವನ್ನು ಮಂಡಿಸಲು ಈಗಾಗಲೇ ಟಿಪ್ಪಣಿ ಕೊಡಲಾಗಿದೆ.ಈ ಯೋಜನೆಯನ್ನು ಖಂಡಿತ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ವಾರ್ಡನ್ ಹುದ್ದೆಯಲ್ಲೂ ಅಗ್ನಿ ವೀರರಿಗೆ ಅವಕಾಶ ನೀಡಲು ಯೋಜಿಸಲಾಗಿದೆ.ಸುಶಿಕ್ಷಿತ ಅಗ್ನಿ ವೀರರಿಗೆ ಸೂಕ್ತ ಹುದ್ದೆ ನೀಡಲು ಚಿಂತಿಸಲಾಗಿದೆ.ಅಗ್ನಿ ವೀರರನ್ನು ನೇಮಿಸಿಕೊಳ್ಳಲು ನಮಗೆ ಹೆಮ್ಮೆ ಇದೆ ಖಂಡಿತ ಹುದ್ದೆ ಮೀಸಲು ಇಡುತ್ತೇವೆ ಎಂದಿದ್ದಾರೆ.
ಕರಾವಳಿಯಲ್ಲಿ ಮೂರು ಸೇನಾ ತರಬೇತಿ ಕೇಂದ್ರ
ಕರಾವಳಿಯಲ್ಲಿ ಮೂರು ಸೇನಾ ತರಬೇತಿ ಕೇಂದ್ರ ಸ್ಥಾಪನೆ ಮಾಡಲು ಈ ಮೊದಲೇ ಆದೇಶ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಕೇಂದ್ರದ ಮೂಲಕ ಅಗ್ನಿಪತ್ ಯೋಜನೆಗೆ ಪೂರಕವಾಗಿ ಕೆಲಸ ಮಾಡುತ್ತೇವೆ. ಸೇನಾ ಸೇರ್ಪಡೆಗೆ ಪೂರ್ವ ತರಬೇತಿ ನೀಡುತ್ತೇವೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕೇಂದ್ರ ಸ್ಥಾಪನೆಯಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಣಿ ಅಬ್ಬಕ್ಕ , ಉಡುಪಿಯಲ್ಲಿ ಕೋಟಿ-ಚೆನ್ನಯ್ಯ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಂಜ ನಾಯ್ಕರ ಹೆಸರಲ್ಲಿ ಕೇಂದ್ರ ಸ್ಥಾಪನೆ ಮಾಡುತ್ತೇವೆ. ಈ ಕೇಂದ್ರಗಳ ಸ್ಥಾಪನೆಗೆ ಈಗಲೇ ಆದೇಶ ಮಾಡಲಾಗಿದೆತಿಂಗಳೊಳಗೆ ಕೇಂದ್ರದ ಚಟುವಟಿಕೆಗಳ ಪ್ರಾರಂಭವಾಗಲಿದೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.