ಬೆಂಗಳೂರು (ಮಾ.04):  ಕಳೆದ ಫೆ.28ರಂದು ನಡೆದ ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಪರೀಕ್ಷೆಗೆ ನಕಲು ಮಾಡುವುದಕ್ಕೆ ಸಹಕರಿಸಲು ಮುಂದಾಗಿ ಸಿಕ್ಕಿಬಿದ್ದಿದ್ದ ಜವಾನನ ಕೈಯಲ್ಲಿದ್ದ ಉತ್ತರಗಳು ಮತ್ತು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಬಿಡುಗಡೆ ಮಾಡಿರುವ ಉತ್ತರಗಳು ಒಂದಕ್ಕೊಂದು ಹೊಂದಾಣಿಕೆಯಾಗುತ್ತಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆಯೇ ಎಂಬ ಸಂಶಯಕ್ಕೆ ಕಾರಣವಾಗಿದೆ.

ವಿಜಯಪುರದ ಜೆಎಸ್‌ಎಸ್‌ ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದ ಬಗ್ಗೆ ಆರೋಪ ಕೇಳಿ ಬಂದಿತ್ತು. ಪರೀಕ್ಷಾ ಅಕ್ರಮಕ್ಕೆ ಸಹಕರಿಸಿದ್ದ ಕಾಲೇಜಿನ ಜವಾನನ ಕೈಯಲ್ಲಿ ಕೀ ಉತ್ತರಗಳು ಲಭ್ಯವಾಗಿದ್ದವು. ಇದೀಗ ಕೆಪಿಎಸ್‌ಸಿ ಬಿಡುಗಡೆ ಮಾಡಿರುವ ಉತ್ತರಗಳು ಇದೇ ರೀತಿಯಲ್ಲಿದ್ದು, ಸಂಶಯಕ್ಕೆ ಕಾರಣವಾಗಿದೆ ಎಂದು ಹಲವು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಕೆಪಿಎಸ್‌ಸಿ: ಗ್ಯಾಂಗ್‌ ರಚಿಸಿ ಪ್ರಶ್ನೆ ಪತ್ರಿಕೆ ಹಂಚಿಕೆ?

ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಎಸ್‌ಸಿ ಕಾರ್ಯದರ್ಶಿ ಜೆ.ಸತ್ಯವತಿ, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಪರೀಕ್ಷಾ ಅಕ್ರಮಕ್ಕೆ ಮುಂದಾದವರು ಸಿಕ್ಕಿಬಿದ್ದಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಸತ್ಯಾಂಶ ಗೊತ್ತಾಗಬೇಕಿದೆ ಎಂದು ತಿಳಿಸಿದ್ದಾರೆ.