ಪ್ರಶ್ನೆ ಪತ್ರಿಕೆ ಹಂಚಿಕೆಗೆ ಪ್ರತ್ಯೇಕ ತಂಡ?| ಕೆಪಿಎಸ್ಸಿ ಪ್ರಶ್ನೆ ಪತ್ರಿಕೆ ಒಂದೇ ಮೂಲದಿಂದ ಸೋರಿಕೆ| ಪ್ರಶ್ನೆ ಪತ್ರಿಕೆ ವಿತರಣೆಗೆ ಪ್ರತ್ಯೇಕ ತಂಡ ರಚನೆ ಶಂಕೆ| ಕೆಪಿಎಸ್‌ಸಿ ನೌಕರ ಬಸವರಾಜ್‌ ಹಾಗೂ ರಮೇಶ್‌ ಬಳಿ ಖಾಲಿ ಚೆಕ್‌ಗಳು ಪತ್ತೆ| 

ಬೆಂಗಳೂರು(ಜ.29): ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದಲ್ಲಿ ಆರೋಪಿಗಳು ಪ್ರತ್ಯೇಕ ತಂಡಗಳಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಕೆಪಿಎಸ್‌ಸಿ ನೌಕರರಾದ ರಮೇಶ್‌, ಬಸವರಾಜ್‌ ಕುಂಬಾರ, ವಾಣಿಜ್ಯ ಇಲಾಖೆ ಇನ್‌ಸ್ಪೆಕ್ಟರ್‌ ಚಂದ್ರು, ರಾಚಪ್ಪ ಹಾಗೂ ಸಿಎಆರ್‌ ಕಾನ್‌ಸ್ಟೇಬಲ್‌ ಮುಸ್ತಾಕ್‌ ಬಂಧಿತರಾಗಿದ್ದಾರೆ. ಈ ಆರೋಪಿಗಳು, ತಮ್ಮದೇ ಸಂಪರ್ಕ ಜಾಲದ ಮೂಲಕ ಎಫ್‌ಡಿಎ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ವಿತರಣೆ ಮಾಡಿರುವ ಸಾಧ್ಯತೆಗಳಿವೆ. ಈ ಬಗ್ಗೆ ಆರೋಪಿಗಳ ಮೊಬೈಲ್‌ ಕರೆಗಳ ವರದಿ (ಸಿಡಿಆರ್‌) ಆಧರಿಸಿ ಅವರ ಸಂಪರ್ಕ ಜಾಲವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

2017ರಲ್ಲಿ ಕೆಪಿಎಸ್‌ಸಿಗೆ ರಮೇಶ್‌, ಬಸವರಾಜ್‌ ಕುಂಬಾರ ಹಾಗೂ ಸನಾ ಬೇಡಿ ಉದ್ಯೋಗಕ್ಕೆ ಸೇರಿದ್ದರು. ಒಂದೇ ಬ್ಯಾಚಿನವರಾದ ಕಾರಣ ಈ ಮೂವರಲ್ಲಿ ಆತ್ಮೀಯ ಸ್ನೇಹವಿತ್ತು. ಇದೇ ಗೆಳೆತನದಲ್ಲೇ ಆಕೆ, ರಮೇಶ್‌ಗೆ ಎಫ್‌ಡಿಎ ಪ್ರಶ್ನೆ ಪತ್ರಿಕೆ ನೀಡಿದ್ದಳು. ಬಳಿಕ ಕೆಪಿಎಸ್‌ಸಿ ಭದ್ರತೆಯಲ್ಲಿದ್ದ ಸಿಎಆರ್‌ ಕಾನ್‌ಸ್ಟೇಬಲ್‌ ಮುಸ್ತಾಕ್‌ಗೂ ಕೂಡ ಸನಾ ಪ್ರಶ್ನೆ ಪತ್ರಿಕೆ ಕೊಟ್ಟಿದ್ದಳು. ಅನಂತರ ರಮೇಶ್‌ ಮೂಲಕ ಬಸವರಾಜ್‌ ಕುಂಬಾರ ಹಾಗೂ ಚಂದ್ರುಗೆ ಪತ್ರಿಕೆ ಹಂಚಿಕೆಯಾಗಿದೆ. ಇತ್ತ ಮುಸ್ತಾಕ್‌ ಮತ್ತೊಬ್ಬರಿಗೆ ಕೊಟ್ಟಿರಬಹುದು. ರಮೇಶ್‌ನಿಂದ ಪತ್ರಿಕೆ ಪಡೆದ ಚಂದ್ರು, ತನ್ನದೇ ಗ್ಯಾಂಗ್‌ ಕಟ್ಟಿಕೊಂಡು ವಿತರಣೆಗೆ ಶುರು ಮಾಡಿದ್ದ. ಹೀಗಾಗಿ ಒಂದೇ ಕಡೆಯಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರೂ ವಿತರಣೆಗೆ ಮಾತ್ರ ಪ್ರತ್ಯೇಕ ತಂಡಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಕೆಪಿಎಸ್ಸಿ ಸಿಬ್ಬಂದಿಯಿಂದಲೇ ಪ್ರಶ್ನೆಪತ್ರಿಕೆ ಸೋರಿಕೆ: ಇಬ್ಬರು ನೌಕರರ ಬಂಧನ

ವಿಚಾರಣೆ ವೇಳೆ ರಮೇಶ್‌ನಿಂದಲೇ ಬಸವರಾಜ್‌ ಕುಂಬಾರ ಮಾಹಿತಿ ಸಿಕ್ಕಿತು. ಮುಸ್ತಾಕ್‌ ಬಗ್ಗೆ ಸನಾ ಬಾಯ್ಬಿಟ್ಟಳು. ಈಗ ಎಲ್ಲ ಆರೋಪಿಗಳನ್ನು ಒಟ್ಟಾಗಿಸಿ ವಿಚಾರಣೆ ನಡೆಸಲಾಗುತ್ತದೆ. ಅನಂತರ ಈ ಆರೋಪಿಗಳಿಂದ ಪ್ರಶ್ನೆ ಪತ್ರಿಕೆ ಪಡೆದವರ ಪಟ್ಟಿಸಿದ್ಧಪಡಿಸಲಾಗಿದೆ. ತಪ್ಪಿಸಿಕೊಂಡಿರುವ ಕೆಲವರ ಪತ್ತೆಗೆ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಗಡವಾಗಿ ಚೆಕ್‌?

ಪ್ರಶ್ನೆ ಪತ್ರಿಕೆ ವಿತರಣೆಗೆ ಕೆಲವರಿಂದ ಆರೋಪಿಗಳು ಮುಂಗಡವಾಗಿ ಚೆಕ್‌ ಪಡೆದಿದ್ದರು. ಒಬ್ಬರಿಗೆ .10 ಲಕ್ಷದಿಂದ .20 ಲಕ್ಷದವರೆಗೆ ಪತ್ರಿಕೆ ಮಾರಾಟವಾಗಿದೆ. ಕೆಪಿಎಸ್‌ಸಿ ನೌಕರ ಬಸವರಾಜ್‌ ಹಾಗೂ ರಮೇಶ್‌ ಬಳಿ ಖಾಲಿ ಚೆಕ್‌ಗಳು ಪತ್ತೆಯಾಗಿವೆ. ಹೀಗಾಗಿ ಪ್ರಶ್ನೆ ಪತ್ರಿಕೆ ವಿತರಣೆಗೆ ಮುನ್ನ ಅಭ್ಯರ್ಥಿಗಳಿಂದ ಆರೋಪಿಗಳು ಮುಂಗಡವಾಗಿ ಚೆಕ್‌ ಪಡೆದಿರುವ ಬಗ್ಗೆ ಅನುಮಾನವಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.