ಮಗುವಾದ ಕಾರಣಕ್ಕೋ, ಓದಿನ ಸಲುವಾಗೋ, ಬೇರೆ ಉದ್ಯಮಕ್ಕೆ ಕೈ ಹಾಕುವ ಆಸೆಯಿಂದಲೋ, ಅನಾರೋಗ್ಯದಿಂದಲೋ- ಒಟ್ಟಿನಲ್ಲಿ ಒಬ್ಬೊಬ್ಬರು ಒಂದೊಂದು ಕಾರಣದಿಂದ ಕೆಲವೊಮ್ಮೆ ಉದ್ಯೋಗಕ್ಕೆ ಬ್ರೇಕ್ ನೀಡಬೇಕಾಗಬಹುದು. ಹೀಗೆ 1ರಿಂದ 5 ವರ್ಷದವರೆಗೆ ಬ್ರೇಕ್ ತೆಗೆದುಕೊಂಡ ಬಳಿಕ  ಮತ್ತೆ ಕೆಲಸ ಹುಡುಕಬೇಕು, ಉದ್ಯೋಗಕ್ಕೆ ಮರಳಬೇಕೆಂದರೆ ಅಷ್ಟೊಂದು ಸುಲಭವಿಲ್ಲ. ಪ್ರತಿದಿನವೂ ಅಪ್ಡೇಟ್ ಆಗಬೇಕಾದ ಈ ಕಾಲದಲ್ಲಿ ಇಷ್ಟೊಂದು ದೊಡ್ಡ ಬ್ರೇಕ್‌ನ ಬಳಿಕ ಮತ್ತೆ ಫಾರ್ಮ್‌ಗೆ ಬರಲು ಕೆಲವೊಂದು ಸಿದ್ಧತೆಗಳು ಬೇಕಾಗುತ್ತವೆ. 

1. ಕೌಶಲ್ಯಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳಿ

ನೀವು ಉದ್ಯೋಗದಿಂದ ಬ್ರೇಕ್ ತೆಗೆದುಕೊಂಡ ಈ ಅವಧಿಯಲ್ಲಿ ಉದ್ಯಮ ಲೋಕ ಖಂಡಿತಾ ಬೆಳೆದಿರುತ್ತದೆ, ಬದಲಾಗಿರುತ್ತದೆ. ಹೊಸ ಕೆಲಸಕ್ಕಾಗಿ ಹುಡುಕಾಟ ಆರಂಭಿಸುವ ಮುನ್ನ ಹೊಸ ಲೋಕವನ್ನು ಪ್ರವೇಶಿಸಲು ಬೇಕಾದ ಕೌಶಲ್ಯಗಳನ್ನು ಸಂಪಾದಿಸಿ. ಹೊಸ ಟ್ರೆಂಡ್, ಭಾಷೆ, ಟೆಕ್ನಾಲಜಿ- ಯಾವುದೆಲ್ಲ ಬದಲಾವಣೆ, ಅಪ್‌ಗ್ರೇಡೇಶನ್ ಅಗತ್ಯವೆಂದು ಹುಡುಕಿ ಅಭ್ಯಾಸ ಮಾಡಿಕೊಳ್ಳಿ. ಆನ್‌ಲೈನ್ ಕೋರ್ಸ್‌ಗಳನ್ನು ಮಾಡಿಕೊಳ್ಳಿ. ಇದಕ್ಕಾಗಿ ಮತ್ತೆ 6 ತಿಂಗಳು ಸವೆಸಿದರೂ ಪರವಾಗಿಲ್ಲ. ಆಗ ಉದ್ಯೋಗ ಹುಡುಕಿ ಸಂದರ್ಶನಕ್ಕೆ ಹೋಗುವಾಗ ಹೆಚ್ಚು ಆತ್ಮವಿಶ್ವಾಸ ನಿಮ್ಮದಾಗಿರುತ್ತದೆ. 

ಪ್ರಾಣಿ ಫೋಟೋ ನೋಡಿದ್ರೆ ಹೆಚ್ಚುತ್ತೆ ಪ್ರೊಡಕ್ಟಿವಿಟಿ!

2. ಫ್ರೀಲ್ಯಾನ್ಸಿಂಗ್

9ರಿಂದ 5 ಗಂಟೆ ಉದ್ಯೋಗಕ್ಕೆ ಜಿಗಿವ ಮುನ್ನ ರೆಗುಲರ್ ಕೆಲಸಕ್ಕೆ ನಿಮ್ಮನ್ನು ನೀವು ಹೊಂದಿಸಿಕೊಳ್ಳುವ ಸಲುವಾಗಿ ಫ್ರೀಲ್ಯಾನ್ಸಿಂಗ್ ಆರಂಭಿಸಿ. ಇಲ್ಲವೇ ಸ್ವಲ್ಪ ಸಮಯದ ಕೆಲಸಕ್ಕೆ ವಾಲಂಟಿಯರ್ ಆಗಬಹುದು. ಇದು ಉದ್ಯೋಗದ ವಾತಾವರಣಕ್ಕೆ ನಿಮ್ಮನ್ನು ಸಜ್ಜಾಗಿಸುತ್ತದೆ. ಮತ್ತೆ ಕಚೇರಿಗೆ ಹೋದಾಗ ಸುಲಭವಾಗಿ ಅಡ್ಜಸ್ಟ್ ಆಗಬಹುದು.

3. ನೆಟ್ವರ್ಕಿಂಗ್

ಉದ್ಯೋಗದ ಫೀಲ್ಡ್‌ನಲ್ಲಿ ಸರಿಯಾದ ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಉದ್ಯೋಗದಲ್ಲಿ ಬ್ರೇಕ್ ತೆಗೆದುಕೊಂಡ ಬಳಿಕ ಹಳೆ ಸಹೋದ್ಯೋಗಿಗಳು, ಗೆಳೆಯರನ್ನು ಭೇಟಿಯಾಗುವುದು, ಕಾಲ್ ಮಾಡುತ್ತಿರುವುದು, ನಿಮ್ಮ ಯೋಜನೆ ಬಗ್ಗೆ ಅವರಿಗೆ ತಿಳಿಸುವುದು ಮುಖ್ಯ. ಅವರು ನಿಮ್ಮನ್ನು ಫೀಲ್ಡ್‌ನಲ್ಲಿರುವ ಹೊಸ ಜನರಿಗೆ ಪರಿಚಯಿಸಬಹುದು. ಉದ್ಯೋಗಾವಕಾಶವಿದ್ದಾಗ ರೆಫರ್ ಮಾಡಬಹುದು. ಜನರೊಂದಿಗೆ ನೆಟ್ವರ್ಕ್ ಹೆಚ್ಚಿದ್ದಷ್ಟೂ ಜಾಬ್ ಮಾರ್ಕೆಟ್ ಕುರಿತು ಹೆಚ್ಚನ್ನು ಕಲಿಯಬಲ್ಲಿರಿ.

4. ಆನ್‌ಲೈನ್ ಜಾಬ್ ಪೋರ್ಟಲ್ಸ್

ನೌಕ್ರಿ, ಲಿಂಕ್ಡ್ ಇನ್ ಸೇರಿದಂತೆ ಆನ್‌ಲೈನ್ ಜಾಬ್ ಪೋರ್ಟಲ್ಸ್ ಹಾಗೂ ನೆಟ್ವರ್ಕಿಂಗ್ ವೆಬ್‌ಸೈಟ್‌ಗಳ ಸಹಾಯ ತೆಗೆದುಕೊಳ್ಳಿ. ನೀವೇನೇನು ಮಾಡಬಲ್ಲಿರಿ, ಅನುಭವ, ಕೌಶಲ್ಯ, ಯಾವ ರೀತಿಯ ಕೆಲಸ ನೋಡುತ್ತಿದ್ದೀರಿ ಎಲ್ಲ ವಿವರಣೆ ಸಹಿತ ಈ ಫೋರ್ಟಲ್‌ಗಳಲ್ಲಿ ಪೋಸ್ಟ್ ಮಾಡಿ. ಬರುವ ನೂರೆಂಟು ನೋಟಿಫಿಕೇಶನ್‌ಗಳಲ್ಲಿ ಏಳೆಂಟಾದರೂ ಉಪಯೋಗಕ್ಕೆ ಬರಬಹುದು. 

ವೃತ್ತಿಯಲ್ಲಿ ನಿಂತ ನೀರಾಗದಂತಿರುವುದು ಹೇಗೆ?

5. ಹೆಚ್ಚು ಕಾಯಬೇಡಿ

ಮತ್ತೆ ಉದ್ಯೋಗಕ್ಕೆ ಹೋಗಬೇಕೆಂದು ನಿರ್ಧರಿಸಿ ಕೌಶಲ್ಯಗಳನ್ನು ಅಪ್‌ಗ್ರೇಡ್ ಮಾಡಿಕೊಂಡ ಬಳಿಕ ನಾಳೆ ನಾಳೆ ಎಂದು ಸಮಯ ವ್ಯರ್ಥ ಮಾಡಬೇಡಿ. ಹಲವಾರು ಜನರು ಸರಿಯಾದ ಅವಕಾಶಕ್ಕಾಗಿ ಕಾಯುತ್ತಲೇ ಒಂದಿಷ್ಟು ಅವಕಾಶಗಳನ್ನು ದೂರ ತಳ್ಳುತ್ತಾರೆ. ಒಮ್ಮೆ ಕೆಲಸ ಪಡೆವವರೆಗೆ ಅತಿಯಾದ ನಿರೀಕ್ಷೆಗಳು ಬೇಡ. ಎಲ್ಲಿಂದಾದರೂ ಉದ್ಯೋಗ ಆರಂಭವಾಗಬೇಕು. ಜೊತೆಗೆ, ಸ್ಯಾಲರಿ, ಪೊಸಿಶನ್ ವಿಷಯದಲಲ್ಲಿ ಉದ್ಯೋಗವು ನಿಮ್ಮ ನಿರೀಕ್ಷೆ ಮುಟ್ಟಿದರೆ, ಉದ್ಯೋಗದ ಸಮಯ, ಸ್ಥಳ ಮುಂತಾದ ವಿಷಯಕ್ಕೆ ನೀವು ಸ್ವಲ್ಪ ಅಡ್ಜಸ್ಟ್ ಆಗಬೇಕು. ಎಲ್ಲವೂ ಸರಿಯಾಗಲೇಬೇಕೆಂದುಕೊಂಡರೆ ಯಾವುದೂ ಸರಿಯಾಗುವುದಿಲ್ಲ. 

6. ಕೆಲವನ್ನು ತಪ್ಪಿಸಿ

ಕೆಲವೊಮ್ಮೆ ಉದ್ಯೋಗ ಹುಡುಕುವ ಕೆಲಸವೇ ಅದೆಷ್ಟು ಹಿಂಸೆ ಮಾಡಿಹಾಕುತ್ತದೆಂದರೆ ತಲೆ ಕೆಟ್ಟಂತಾಗಿ ಏನು ಮಾಡುತ್ತಿದ್ದೀವೆಂಬ ಅರಿವೇ ಇರದೆ ಏನೇನೋ ಮಾಡಿಬಿಡಬಹುದು. ಇದರಿಂದ ನಂತರದಲ್ಲಿ ಪಶ್ಚಾತ್ತಾಪ ಪಡುವಂತಾದೀತು. ಉದಾಹರಣೆಗೆ  ರೆಸ್ಯೂಮೆಯಲ್ಲಿ ಸುಳ್ಳು ಮಾಹಿತಿಗಳನ್ನು ಸೇರಿಸುವುದು. ಕೆಲಸ ಏಕೆ ಬಿಟ್ಟಿದ್ದಿರಿ ಎಂಬ ಕುರಿತು ಎಂದಿಗೂ ಸುಳ್ಳು ಹೇಳಬೇಡಿ. ಜೊತೆಗೆ, ಒಂದೇ ಸಂಸ್ಥೆ, ಹಳೆಯ ಬಾಸ್ ಇಷ್ಟನ್ನೇ ನಂಬಿ ಕುಳಿತುಕೊಳ್ಳಬೇಡಿ. ಯಾವತ್ತಿಗೂ ಭರವಸೆ ಕಳೆದುಕೊಳ್ಳಬೇಡಿ. ಆತ್ಮವಿಶ್ವಾಸ ಕುಂದದಂತೆ ನೋಡಿಕೊಳ್ಳಿ. ಏಕೆಂದರೆ, ಆತ್ಮವಿಶ್ವಾಸವಿದ್ದರೆ ಉದ್ಯೋಗ ತೆಗೆದುಕೊಳ್ಳುವುದೇನು ದೊಡ್ಡದಲ್ಲ.