ಸೋಷಿಯಲ್ ಮೀಡಿಯಾದಲ್ಲಿ ಪ್ರವಾಸದ ಸ್ಟೇಟಸ್ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಇದು ಕಳ್ಳರಿಗೆ ನಿಮ್ಮ ಮನೆ ಖಾಲಿ ಇದೆ ಎಂದು ನೀವೇ ಮಾಹಿತಿ ನೀಡಿದಂತೆ ಎಂದು ಡಿವೈಎಸ್ಪಿ ಎಚ್ಚರಿಸಿದ್ದಾರೆ. ಆದ್ದರಿಂದ, ಪ್ರವಾಸ ಮುಗಿಸಿ ಬಂದ ನಂತರ ಫೋಟೋಗಳನ್ನು ಹಂಚಿಕೊಳ್ಳುವುದು ಸುರಕ್ಷಿತ.
ಇತ್ತೀಚಿನ ವರ್ಷಗಳಲ್ಲಿ ಮಾತುಕತೆಯ ಬದಲು ಮೆಸೇಜ್ಗಳದ್ದೇ ಕಾರುಬಾರು. ಅದರಲ್ಲಿಯೂ ಯಾರಿಗಾದರೂ ಏನಾದರೂ ಮೆಸೇಜ್ ಕಳುಹಿಸಬೇಕು ಎಂದರೆ, ವಾಟ್ಸ್ಆ್ಯಪ್ನಲ್ಲಿ ಹಾಕಿದ್ರೆ ನೋಡ್ತಾರೋಇಲ್ವೋ, ಆದರೆ ಸ್ಟೇಟಸ್ನಲ್ಲಿ ಹಾಕಿದ ತಕ್ಷಣ ಗೊತ್ತಾಗಿಬಿಡತ್ತೆ. ಆದ್ದರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸ್ಟೇಟಸ್ ಅನ್ನೋದು ದೊಡ್ಡ ಹೆಮ್ಮಯ ವಿಷಯವಾಗಿದೆ. ಅದರಲ್ಲಿಯೂ ಪ್ರಯಾಣ ಮಾಡಿದಾಗ, ಯಾವುದೋ ಅಪರೂಪದ ಸ್ಥಳಗಳಿಗೆ ಭೇಟಿ ಕೊಟ್ಟಾಗ, ಮನೆಯಲ್ಲಿ ಏನಾದರೂ ಹೊಸತು ತೆಗೆದುಕೊಂಡಾಗ, ಸ್ಟೇಟಸ್ ಹಾಕಿಕೊಂಡು, ಅದನ್ನು ಒಂದಷ್ಟು ಜನ ನೋಡಿದ್ರೆ ತುಂಬಾ ಖುಷಿ. ಇದು ಸಾಮಾನ್ಯ ಎಲ್ಲರೂ ಮಾಡುವಂಥದ್ದೇ.ಕೆಲವೊಮ್ಮೆ ಬೇರೆಯವರು ಹೊಟ್ಟೆ ಉರಿದುಕೊಳ್ಳಲಿ ಎಂದು ಸ್ಟೇಟಸ್ ಹಾಕಿಕೊಂಡರೆ, ಮತ್ತೆ ಕೆಲವೊಮ್ಮೆ ತಮ್ಮ ಸಂತೋಷವನ್ನು ಈ ರೀತಿ ವ್ಯಕ್ತಪಡಿಸುವುದು ಇದೆ.
ಅವೆಲ್ಲವೂ ಸರಿ. ಆದರೆ, ಪ್ರವಾಸಕ್ಕೆ ಹೋಗಿದ್ದರೆ ಅಥವಾ ಹೊರಡುವುದಿದ್ದರೆ ಅದರ ಫುಲ್ ಡಿಟೇಲ್ಸ್ ಕೊಟ್ಟು ಸ್ಟೇಟಸ್ ಹಾಕಿಕೊಂಡು ಬಿಡುವುದು ಮಾತ್ರ ಭಾರಿ ಡೇಂಜರ್. ತಾನು ಎಂಜಾಯ್ ಮಾಡುತ್ತಿರುವುದು ಬೇರೆಯವರಿಗೆ ತಿಳಿಯಲಿ ಎನ್ನುವುದು ಕೆಲವರ ಉದ್ದೇಶವಾಗಿದ್ದರೆ, ಅದನ್ನು ನೋಡಿ ಅವರಿಗೆ ಆಗದವರು ಯಾರೋ ಹೊಟ್ಟೆಕಿಚ್ಚು ಪಟ್ಟುಕೊಳ್ಳಲಿ ಎನ್ನುವ ಕಾರಣವೂ ಅದರಲ್ಲಿ ಅಡಗಿರುತ್ತದೆ. ಒಟ್ಟಿನಲ್ಲಿ ಸ್ಟೇಟಸ್ ನೋಡಿದ್ರೆ ಆ ದಿನ ಆ ವ್ಯಕ್ತಿ ಯಾವ ಮೂಡ್ನಲ್ಲಿ ಇದ್ದಾರೆ ಎನ್ನುವುದು ತಿಳಿಯುತ್ತದೆ. ಎಷ್ಟೋ ಬಾರಿ ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿಟ್ಟುಕೊಂಡು ಹಾಕುವ ಸ್ಟೇಟಸ್ಗಳೇ ಹೆಚ್ಚಾಗಿರುತ್ತವೆ.
ಕಳ್ಳರಿಗೆ ಮನೆ ಕೀಲಿ
ಉದ್ದೇಶ ಏನೇ ಇರಲಿ. ಆದರೆ ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಎಷ್ಟೋ ಬಾರಿ ಹಾಕಿಕೊಳ್ಳುವ ಸ್ಟೇಟಸ್ ನಿಮ್ಮ ಇರೋ ಬರೋ ಎಲ್ಲಾ ಸ್ಟೇಟಸ್ಗಳನ್ನು ಮಣ್ಣುಪಾಲು ಮಾಡಬಹುದು. ಅರ್ಥಾತ್, ಈ ಸ್ಟೇಟಸ್ ಅನ್ನೋದು ಕಳ್ಳರಿಗೆ ನೀವೇ ನಿಮ್ಮ ಮನೆಯ ಬೀಗದ ಕೀಲಿ ಕೊಟ್ಟು ಕಳ್ಳತನ ಮಾಡಲು ಬಾ... ಎಂದು ಆಹ್ವಾನ ನೀಡಿದಂತೆ ಎಂದಿದ್ದಾರೆ. ಪ್ರವಾಸಗಳಿಗೆ ಹೋದ ಸಂದರ್ಭಗಳಲ್ಲಿ I am enjoying ಇಲ್ಲಿ.. ಅಲ್ಲಿ... ಎಂದೆಲ್ಲಾ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ದೊಡ್ಡ ವರ್ಗವೇ ಇದೆ. ಎಷ್ಟೋ ಬಾರಿ ಇವರು ಪ್ರವಾಸಗಳನ್ನು ಎಂಜಾಯ್ ಮಾಡಲು ಹೋಗಿದ್ದಾರೋ ಅಥವಾ ಫೋಟೋ ಕ್ಲಿಕ್ಕಿಸಿ ಅದನ್ನು ಅಪ್ಲೋಡ್ ಮಾಡಿಕೊಳ್ಳಲು ಹೋಗಿದ್ದಾರೋ ಎನ್ನುವುದು ಕನ್ಫ್ಯೂಸ್ ಆಗುವ ರೀತಿಯಲ್ಲಿ ಇರುತ್ತದೆ. ನೀವು ಹೀಗೆ ಹಾಕಿಕೊಳ್ಳುವ ಸ್ಟೇಟಸ್ಸು, ಅಪ್ಲೋಡ್ ಮಾಡುವ ಫೋಟೋಗಳು, ನೀವು ಎಲ್ಲಿದ್ದೀರಿ ಎಂದು ನೀಡುವ ಮಾಹಿತಿಗಳನ್ನು ನೋಡಿ ನಿಮ್ಮ ಸ್ನೇಹಿತರು ಲೈಕ್ ಮಾಡಿ ಕಮೆಂಟ್ ಮಾಡುತ್ತಾರೋ ಬಿಡುತ್ತಾರೋ, ಆದರೆ ಕಳ್ಳರಿಗೆ ಇದು ಆಹ್ವಾನ ನೀಡಿದಂತೆ ಎಂದು ಎಚ್ಚರಿಸಿದ್ದಾರೆ ಡಿವೈಎಸ್ಪಿ ಎಲ್.ವೈ ರಾಜೇಶ್.
ವಾಪಸ್ ಬಂದ್ಮೇಲೆ ಹಾಕಿಕೊಳ್ಳಿ ಎಂದು ಸೂಚನೆ
ಇವರು ಸಂದರ್ಶನವೊಂದರಲ್ಲಿ ಈ ವಿಷಯದ ಬಗ್ಗೆ ರಿವೀಲ್ ಮಾಡಿದ್ದಾರೆ. ನಾವು ಹಾಕುವ ಸ್ಟೇಟಸ್ನಿಂದ ಹೇಗೆ ಕಳ್ಳರನ್ನು ಆಹ್ವಾನಿಸುತ್ತೇವೆ ಎಂದು ತಿಳಿಸಿದ್ದಾರೆ. ಅದಕ್ಕೆ ಉದಾಹರಣೆ ಕೊಟ್ಟ ಡಿವೈಎಸ್ಪಿ ರಾಜೇಶ್ ಅವರು, ನಡೆದ ಘಟನೆಯೊಂದನ್ನು ವಿವರಿಸಿದ್ದಾರೆ. ಒಬ್ಬಾತ I am Enjoying in Goa ಅಂತ ಸ್ಟೇಟಸ್ ಹಾಕ್ಕೊಂಡಾ- ವಾಪಸ್ ಮನೆಗೆ ಬಂದ್ ನೋಡಿದ್ರೆ ಕಳ್ಳರು ಮನೆಯನ್ನೆಲ್ಲಾ ಕ್ಲೀನ್ ಮಾಡಿ ಹೋಗಿದ್ರು. ಆಮೇಲೆ ಗೊತ್ತಾಗಿದ್ದು, ಈತನ ಸ್ಟೇಟಸ್ ನೋಡಿ ಎಷ್ಟು ದಿನ ಆತ ಮನೆಗೆ ಬರುವುದಿಲ್ಲ ಎನ್ನುವುದೆಲ್ಲಾ ಕಳ್ಳರಿಗೆ ತಿಳಿದಿದೆ. ಆದ್ದರಿಂದ ಕರಾಮತ್ತು ತೋರಿಸಿದ್ದಾರೆ ಎಂದಿದ್ದಾರೆ. ಒಂದು ವೇಳೆ ನೀವು ಎಲ್ಲಿಗಾದರೂ ಹೋಗಿರೋದನ್ನು ಸೋಷಿಯಲ್ ಮೀಡಿಯಾದ ಮೂಲಕ ಜಗಜ್ಜಾಹೀರ ಮಾಡಲೇಬೇಕು ಎಂದಾದರೆ ವಾಪಸ್ ಬಂದ ಮೇಲೆ I enjoyed in Goa ಅಂತ ಹಾಕಿಕೊಳ್ಳಿ, ಆದರೆ ಹೋಗುವಾಗ ನಿಮ್ಮ ಮನೆ ಕೀಲಿಕೈಯನ್ನು ಕಳ್ಳರಿಗೆ ಕೊಟ್ಟು ಹೋಗ್ಬೇಡಿ ಎಂದಿದ್ದಾರೆ.


