ಹಳ್ಳಿಗೆ ಮರಳಿ ಹೈನುಗಾರಿಕೆಗೆ ಕಾಲಿಟ್ಟ ಅವರು ಆರಂಭದಲ್ಲಿ ತಮ್ಮ ಮನೆಯಲ್ಲಿ ಏಳು ಸಾಹಿವಾಲ್ ಹಸುಗಳೊಂದಿಗೆ ಹೈನುಗಾರಿಕೆಯನ್ನು ಪ್ರಾರಂಭಿಸಿದರು. ಕ್ರಮೇಣ ಅವರು ಅದನ್ನು 20 ಹಸುಗಳ ಸಾಕಣೆ ಕೇಂದ್ರಕ್ಕೆ ಹೆಚ್ಚಿಸಿದರು.

ಮೊದಲಿನಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಜನರು ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಅಂತೆಯೇ ಸದ್ಯ, ಪಾಟ್ನಾ ಜಿಲ್ಲೆಯ ಧನ್ರುವಾ ಬ್ಲಾಕ್ ನಿವಾಸಿ ಸಂತೋಷ್ ಕುಮಾರ್ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದ್ದು, ಇದು ಅವರ ಆದಾಯವನ್ನು ಹೆಚ್ಚಿಸಿರುವುದಲ್ಲದೆ, ಸುತ್ತಮುತ್ತಲಿನ ರೈತರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುತ್ತಿದೆ. ಹೌದು, ಸಂತೋಷ್ ಕುಮಾರ್ ತಮ್ಮ ಹೈನುಗಾರಿಕೆ ಕ್ಷೇತ್ರದ ಮೂಲಕ ಸಣ್ಣ ರೈತರು ದೊಡ್ಡ ಪ್ರಮಾಣದಲ್ಲಿ ಹಾಲು ಉತ್ಪಾದಿಸಲು ಮತ್ತು ಮಾರಾಟ ಮಾಡಲು ಸಹಾಯ ಮಾಡಿದ್ದಾರೆ.

ಎಂಜಿನಿಯರಿಂಗ್ ಕೆಲಸ ಬಿಟ್ಟು ಹಳ್ಳಿಗೆ ಮರಳಿದ ಸಂತೋಷ್

ಎಂಜಿನಿಯರಿಂಗ್ ಮುಗಿಸಿದ ನಂತರ ಸಂತೋಷ್ ಕುಮಾರ್ ಗುಜರಾತ್‌ನ ಎಬಿಜಿ ಶಿಪ್‌ಯಾರ್ಡ್‌ನಲ್ಲಿ ಕೆಲಸ ಮಾಡಿದರು. ಇಲ್ಲಿ ಅವರಿಗೆ ಶಾಶ್ವತ ಉದ್ಯೋಗವಿದ್ದರೂ ಹಳ್ಳಿಗೆ ಹಿಂತಿರುಗಿ ಸ್ವಂತ ವ್ಯವಹಾರ ಮಾಡಲು ನಿರ್ಧರಿಸಿದರು. ತಮ್ಮ ಹಳ್ಳಿಗೆ ಮರಳಿ ಹೈನುಗಾರಿಕೆಗೆ ಕಾಲಿಟ್ಟ ಅವರು ಆರಂಭದಲ್ಲಿ ತಮ್ಮ ಮನೆಯಲ್ಲಿ ಏಳು ಸಾಹಿವಾಲ್ ಹಸುಗಳೊಂದಿಗೆ ಹೈನುಗಾರಿಕೆಯನ್ನು ಪ್ರಾರಂಭಿಸಿದರು. ಕ್ರಮೇಣ ಅವರು ಅದನ್ನು 20 ಹಸುಗಳ ಸಾಕಣೆ ಕೇಂದ್ರಕ್ಕೆ ಹೆಚ್ಚಿಸಿದರು.

ಸಂತೋಷ್ ಕುಮಾರ್ ಅವರ ಫಾರ್ಮ್‌ನಲ್ಲಿ ರೈತರಿಗೆ ಲೀಟರ್‌ಗೆ 50 ರೂ.ಗೆ ಹಾಲು ಮಾರಾಟ ಮಾಡುವ ಅವಕಾಶವನ್ನು ನೀಡಲಾಗುತ್ತದೆ. ಇದು ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಲೀಟರ್ 35-45 ರೂ.ಗಳಿಗಿಂತ ಹೆಚ್ಚು. ಹಾಲಿನ ಬ್ಯುಸಿನೆಸ್ ಆರಂಭಿಸಿದ ನಂತರ, ಕೌಶಲೇಂದ್ರ ಕುಮಾರ್ ಅವರೊಂದಿಗೆ ಕಂಪನಿಯೊಂದನ್ನೂ ಪ್ರಾರಂಭಿಸಿದರು. ಮತ್ತು ಇತರ ರೈತರಿಗೆ ಅವರೊಂದಿಗೆ ಸೇರಲು ಅವಕಾಶವನ್ನು ನೀಡಿದರು.

ಇಲ್ಲಿ ರೈತರಿಗೆ ಉತ್ತಮ ಬೆಲೆಗೆ ಹಾಲು ಮಾರಾಟ ಮಾಡುವ ಅವಕಾಶ ಸಿಕ್ಕಿತು. ಅಷ್ಟೇ ಅಲ್ಲ, ಸಂತೋಷ್‌ ಜಮೀನಿನಲ್ಲಿ ಕರು ಸಾಕಾಣೆ ಮತ್ತು ಮಾರಾಟವನ್ನು ಸಹ ಪ್ರೋತ್ಸಾಹಿಸಲಾಯಿತು. ಇದು ರೈತರ ಆದಾಯವನ್ನು ಮತ್ತಷ್ಟು ಹೆಚ್ಚಿಸಿತು. ಸಂದರ್ಶನವೊಂದರಲ್ಲಿ ಸಂತೋಷ್ ಹೇಳಿರುವ ಪ್ರಕಾರ, "ಒಬ್ಬ ರೈತ 10 ಹಸುಗಳೊಂದಿಗೆ ಹೈನುಗಾರಿಕೆ ಮಾಡಿದರೆ ಅವನು ತಿಂಗಳಿಗೆ 60,000-70,000 ರೂ.ಗಳವರೆಗೆ ಗಳಿಸಬಹುದು. ಮೊದಲು, ರೈತರು ಕೇವಲ 10-20 ಸಾವಿರ ರೂ.ಗಳನ್ನು ಗಳಿಸುತ್ತಿದ್ದರು" ಎಂದು ತಿಳಿಸಿದ್ದಾರೆ.

ಪರಿಸರ ಸ್ನೇಹಿಯಾಗಿದೆ ಕೃಷಿ ಮಾದರಿ

ಸಂತೋಷ್ ಕುಮಾರ್ ಅವರ ಕೃಷಿ ಮಾದರಿ ಪರಿಸರ ಸ್ನೇಹಿಯಾಗಿದೆ. ಅವರು ತಮ್ಮ ಜಮೀನಿನಲ್ಲಿ ನೈಸರ್ಗಿಕ ಗಾಳಿ ಬೀಸುವ ಹವಾಮಾನ ಶೆಡ್‌(Weather shed) ಗಳನ್ನು ಬಳಸಿದ್ದಾರೆ. ಇದರ ಜೊತೆಗೆ, ಅವರು ಪ್ರಾಸ್ಟಿಕ್ ತ್ಯಾಜ್ಯದಿಂದ ಮಾಡಿದ ಛಾವಣಿಯ ಹಾಳೆ(Roofing sheet)ಗಳನ್ನು ಬಳಸಿದ್ದಾರೆ. ಸಾವಯವ ಗೊಬ್ಬರವನ್ನು ತಯಾರಿಸಲು ಹಸುವಿನ ಸಗಣಿಯನ್ನೂ ಬಳಸಲಾಗುತ್ತದೆ. ಇದು ರಾಸಾಯನಿಕ ಗೊಬ್ಬರಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ.

ಸಂತೋಷ್‌ ಕುಮಾರ್ ತಮ್ಮ ಜಮೀನಿನಲ್ಲಿ ಅನಂತ್ ತಳಿಯ ಸೋರ್ಗಮ್ ಹಸಿರು ಮೇವನ್ನು ನೆಟ್ಟಿದ್ದಾರೆ. ಇದು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 4-5 ವರ್ಷಗಳವರೆಗೆ ಬೆಳೆಯುತ್ತದೆ. ಒಂದು ಎಕರೆಯಲ್ಲಿ ಹಸಿರು ಮೇವು ನೆಡಲು ಕೇವಲ 3,500-4,000 ರೂ.ಗಳು ಮಾತ್ರ ವೆಚ್ಚವಾಗುತ್ತದೆ. ಇದು 20 ಹಸುಗಳಿಗೆ ಸಾಕಾಗುತ್ತದೆ ಎಂದು ತಿಳಿಸಿದ್ದಾರೆ ಸಂತೋಷ್. ರೈತರಿಗೆ ಬೆಂಬಲ ನೀಡುತ್ತಿರುವ ಸಂತೋಷ್ ಕುಮಾರ್, ಇದುವರೆಗೆ 10 ರೈತರು ಹೈನುಗಾರಿಕೆ ಆರಂಭಿಸಲು 10 ಲಕ್ಷ ರೂಪಾಯಿ ಸಾಲ ಪಡೆಯಲು ಸಹಾಯ ಮಾಡಿದ್ದಾರೆ. ಅವರ ಜಮೀನಿಗೆ ಸಂಬಂಧಿಸಿದ ರೈತರು ಈಗ ಮಾಸಿಕ 80 ಸಾವಿರದಿಂದ ಒಂದು ಲಕ್ಷ ರೂಪಾಯಿಯ ಆದಾಯವನ್ನು ಗಳಿಸುತ್ತಿದ್ದಾರೆ.

ಅತ್ಯುತ್ತಮ ಲಾಭ
ಸಂತೋಷ್ ಹೇಳುವ ಪ್ರಕಾರ, ಹಳ್ಳಿಯಲ್ಲಿ ವಾಸಿಸುವಾಗ ಪಶುಸಂಗೋಪನೆ ಬಿಟ್ಟು ಇನ್ನಾವುದೇ ಕೆಲಸದಿಂದ ಉತ್ತಮ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಅವರು ಇತರ ಯುವಕರನ್ನು ಹೈನುಗಾರಿಕೆಯತ್ತ ಹೆಜ್ಜೆ ಹಾಕಲು ಪ್ರೇರೇಪಿಸಿದ್ದಾರೆ. ಅವರ ಜಮೀನು ಪಾಟ್ನಾ ಜಿಲ್ಲೆಯ ಸೋನ್ಮೈ ಪಂಚಾಯತ್‌ನ ಬಿರ್ ಗ್ರಾಮದಲ್ಲಿದೆ. ಸಂತೋಷ್ ಕುಮಾರ್ ಅವರ ಹೈನುಗಾರಿಕೆ ಮಾದರಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಅವರ ಪ್ರಯತ್ನಗಳು ಅವರ ಸ್ವಂತ ಆದಾಯವನ್ನು ಹೆಚ್ಚಿಸಿದಲ್ಲದೆ, ಸುತ್ತಮುತ್ತಲಿನ ರೈತರು ಸ್ವಾವಲಂಬಿಗಳಾಗಲು ಸಹಾಯ ಮಾಡಿವೆ.