Job Creation : ಉದ್ಯೋಗ ಸೃಷ್ಟಿಸಬಲ್ಲ ಯೋಜನೆಯ ಪೂರ್ವಭಾವಿ ಸಭೆ ನಡೆಸಿದ ಅಶ್ವತ್ಥನಾರಾಯಣ
* ಉದ್ದೇಶಿತ ವಿಶ್ವ ದರ್ಜೆಯ `ಬೆಂಗಳೂರು ಡಿಸೈನ್ ಡಿಸ್ಟ್ರಿಕ್ಟ್’ ಯೋಜನೆ
* ಪೂರ್ವಭಾವಿ ಸಮಾಲೋಚನೆ ನಡೆಸಿದ ಸಚಿವ ಅಶ್ವತ್ಥನಾರಾಯಣ
* ಯೋಜನೆಯು ಕಾರ್ಯರೂಪಕ್ಕೆ ಬಂದರೆ, ಇದು ದೇಶದ ಪ್ರಪ್ರಥಮ ವಿನ್ಯಾಸ ವಲಯವೆಂಬ ಹೆಗ್ಗಳಿಕೆ
ಬೆಂಗಳೂರು, (ನ.27): ಐದು ವರ್ಷಗಳಲ್ಲಿ 32 ಸಾವಿರಕ್ಕೂ ಹೆಚ್ಚು ನೇರ ಮತ್ತು 65 ಸಾವಿರ ಪರೋಕ್ಷ ಉದ್ಯೋಗಗಳನ್ನು (Jobs) ಸೃಷ್ಟಿಸಬಲ್ಲ ವಿಶ್ವ ದರ್ಜೆಯ `ಬೆಂಗಳೂರು ವಿನ್ಯಾಸ ವಲಯ’ವನ್ನು (ಬೆಂಗಳೂರು ಡಿಸೈನ್ ಡಿಸ್ಟ್ರಿಕ್ಟ್) ಸ್ಥಾಪಿಸುವ ಸಂಬಂಧ ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ (Dr CN Ashwath Narayan) ಅವರು ಆಸಕ್ತ ಹೂಡಿಕೆದಾರರೊಂದಿಗೆ ಪೂರ್ವಭಾವಿ ಸಮಾಲೋಚನೆ ನಡೆಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಬೆಂಗಳೂರು ವಿನ್ಯಾಸ ವಲಯ ಸ್ಥಾಪನೆ ( Bangalore Design district Project) ಕುರಿತು ಆಸಕ್ತಿ ತಾಳಿರುವ ಜೈನ್ ವಿಶ್ವವಿದ್ಯಾಲಯ, ವಿಶ್ವ ವಿನ್ಯಾಸ ಸಮಿತಿ (ಡಬ್ಲ್ಯುಡಿಸಿ) ಮತ್ತು ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ (ಐಎಸ್ ಡಿಸಿ) ಉನ್ನತ ಮಟ್ಟದ ನಿಯೋಗವು ತನ್ನ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿತು. ಐಎಸ್ ಡಿಸಿ ನಿರ್ದೇಶಕ ಟಾಮ್ ಜೋಸೆಫ್ ಈ ನಿಯೋಗದ ನೇತೃತ್ವ ವಹಿಸಿದ್ದರು.
students scholarship: ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಯೋಜನೆಯು ಕಾರ್ಯರೂಪಕ್ಕೆ ಬಂದರೆ, ಇದು ದೇಶದ ಪ್ರಪ್ರಥಮ ವಿನ್ಯಾಸ ವಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಒಟ್ಟು ಐದು ವರ್ಷಗಳಲ್ಲಿ ಹಂತಹಂತವಾಗಿ ಅನುಷ್ಠಾನಕ್ಕೆ ತರಬಹುದಾದ ಈ ಯೋಜನೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿ 100ರಿಂದ 150 ಎಕರೆ ಜಮೀನು ಅಗತ್ಯವಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಇದನ್ನು ಒದಗಿಸಿದರೆ ಅದನ್ನು ಖರೀದಿಸಲು ಸಿದ್ಧ ಎಂದು ನಿಯೋಗವು ತಿಳಿಸಿದೆ. ಮೊದಲಿಗೆ 25 ಎಕರೆ ಜಮೀನು ಬೇಕಾಗುತ್ತದೆ. ಯೋಜನೆಯ ಮೊದಲ ಹಂತವು 2022ರ ಜನವರಿಯಲ್ಲಿ ಆರಂಭವಾಗಿ ಡಿಸೆಂಬರ್ ನಲ್ಲಿ ಮುಗಿಯುವ ಸಂಭವವಿದೆ ಎಂದು ಸಚಿವರಿಗೆ ನಿಯೋಗ ತಿಳಿಸಿತು.
ತಾವು ಇತ್ತೀಚೆಗೆ ದುಬೈನಲ್ಲಿ ನಡೆದ ವರ್ಲ್ಡ್ ಎಕ್ಸ್ ಪೋದಲ್ಲಿ ಭಾಗವಹಿಸಿದ್ದಾಗ, ಕೆಲವು ಕಂಪನಿಗಳು ವಿನ್ಯಾಸ ವಲಯ ಸ್ಥಾಪಿಸುವ ಆಸಕ್ತಿ ಪ್ರದರ್ಶಿಸಿದ್ದವು. ಆ ಸಂದರ್ಭದಲ್ಲಿ, ನವೆಂಬರ್ ತಿಂಗಳಿನಲ್ಲಿ ಇದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಮಾಲೋಚನೆ ನಡೆಸುವ ಆಶ್ವಾಸನೆ ಕೊಡಲಾಗಿತ್ತು. ಅದರ ಒಂದು ಭಾಗವಾಗಿ ನಿಯೋಗದ ಜತೆ ಚರ್ಚಿಸಲಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರು ಅತ್ಯುತ್ತಮ ತಾಣ
ಈಗಾಗಲೇ 6 ಡಿಸೈನ್ ಕಾಲೇಜುಗಳನ್ನು ಹೊಂದಿರುವ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೊರಗುತ್ತಿಗೆಗೆ ಹೆಸರಾಗಿದೆ. ಐಟಿ ಮತ್ತು ನವೋದ್ಯಮ ರಾಜಧಾನಿಯಾಗಿರುವ ಇಲ್ಲಿ ಅತ್ಯುತ್ತಮ ಮೂಲಸೌಲಭ್ಯವೂ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿನ್ಯಾಸ ವಲಯವನ್ನು ಸ್ಥಾಪಿಸಲು ಆಸಕ್ತವಾಗಿರುವುದಾಗಿ ನಿಯೋಗವು ಸಚಿವರಿಗೆ ಮನದಟ್ಟು ಮಾಡಿಕೊಟ್ಟಿದೆ.
ಜೊತೆಗೆ ಸರಕಾರವು ವಿನ್ಯಾಸ ವಲಯಕ್ಕೆ ಸಂಬಂಧಿಸಿದಂತೆ ನೀತಿಯನ್ನು ರೂಪಿಸಬೇಕಾದ ಅಗತ್ಯದ ಬಗ್ಗೆಯೂ ಅದು ಪ್ರಸ್ತಾಪಿಸಿದೆ.
ಉದ್ದೇಶಿತ ವಿನ್ಯಾಸ ವಲಯವು ವಿಶ್ವ ದರ್ಜೆಯದಾಗಿರಲಿದ್ದು, ಇಲ್ಲಿ ಕೈಗಾರಿಕಾ ವಿನ್ಯಾಸ, ಉತ್ಪನ್ನಗಳ ವಿನ್ಯಾಸ, ಅನಿಮೇಷನ್, ವಿಶುಯಲ್ ಗ್ರಾಫಿಕ್ಸ್, ಗೇಮ್ ಡಿಸೈನ್, ಡಿಜಿಟಲ್ ವಸ್ತು ವಿಷಯ, ಸ್ಮಾರ್ಟ್ ಸಿಟಿ ವಿನ್ಯಾಸ, ಶಬ್ದ ವಿನ್ಯಾಸ, ಬೊಂಬೆಗಳು, ಕಲೆ ಮತ್ತು ಕರಕುಶಲ, ವಸ್ತ್ರ, ಫ್ಯಾಷನ್ ಮತ್ತು ಆಭರಣಗಳ ವಿನ್ಯಾಸ ಎಲ್ಲವೂ ಒಂದೇ ಕಡೆ ಸಾಧ್ಯವಾಗಲಿದೆ. ಇದರಿಂದ ಸ್ಥಳೀಯ ಪ್ರತಿಭೆಗಳಿಗೆ ಉಜ್ವಲ ಅವಕಾಶ ಸಿಗಲಿವೆ ಎಂದು ನಿಯೋಗವು ಹೇಳಿದೆ ಎಂದು ಸಚಿವರು ವಿವರಿಸಿದ್ದಾರೆ.
ಇದಲ್ಲದೆ, ಈ ವಿನ್ಯಾಸ ವಲಯದಲ್ಲಿ ಕಾರ್ಪೊರೇಟ್ ಕಂಪನಿಗಳು, ನವೋದ್ಯಮಗಳು ಕೂಡ ಕಾರ್ಯ ನಿರ್ವಹಿಸಬಹುದು. ಜೊತೆಗೆ ಇಲ್ಲಿ ವಿನ್ಯಾಸ ಪರಿಪೋಷಣಾ ಕೇಂದ್ರಗಳು, ಸೂಪರ್ ಫ್ಯಾಬ್ ಲ್ಯಾಬ್, ವಿನ್ಯಾಸ ಕೌಶಲ್ಯ ಮತ್ತು ತರಬೇತಿ ಪೂರೈಕೆ, ಕಾರ್ಯಾಗಾರಗಳು, ಅತ್ಯಾಧುನಿಕ ಎವಿಜಿಸಿ ಮತ್ತು 3ಡಿ ಸ್ಟುಡಿಯೋ ಸೇರಿದಂತೆ ಹತ್ತಾರು ಆಧುನಿಕ ಸೌಲಭ್ಯಗಳು ಇರಲಿವೆ. ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಮತ್ತು ವಿನ್ಯಾಸಕರು ಸ್ಥಳೀಯರೊಂದಿಗೆ ಸಹಭಾಗಿತ್ವ ಹೊಂದುವುದನ್ನು ಉತ್ತೇಜಿಸಲು ಸನಿವಾಸ ಕಾರ್ಯಕ್ರಮವನ್ನೂ ರೂಪಿಸಲಾಗುವುದು ಎಂದು ನಿಯೋಗದಲ್ಲಿದ್ದ ಸದಸ್ಯರು ತಿಳಿಸಿದ್ದಾರೆ ಎಂದು ಅವರು ನುಡಿದರು.
ಉದ್ದೇಶಿತ ವಿನ್ಯಾಸ ವಲಯವು ನೂರಕ್ಕೆ ನೂರರಷ್ಟು ಪರಿಸರಸ್ನೇಹಿ ಆಗಿರಲಿದ್ದು, ಇಲ್ಲಿ ಜಾಗತಿಕ ಮಟ್ಟದ `ಬೆಂಗಳೂರು ಡಿಸೈನ್ ಉತ್ಸವ’ವನ್ನು ನಡೆಸುವ ಆಲೋಚನೆ ಇದೆ. ಇದು ಸಾಧ್ಯವಾದರೆ, ವಿನ್ಯಾಸ ಕ್ಷೇತ್ರಕ್ಕೆ ಹೆಚ್ಚು ಹೂಡಿಕೆ ಹರಿದು ಬರಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.
ಸಮಾಲೋಚನಾ ಸಭೆಯಲ್ಲಿ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಉಪಸ್ಥಿತರಿದ್ದರು.