ದುಬೈ(ಸೆ.11): ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿದೆ. ಈಗಾಗಲೇ ಕ್ರಿಕೆಟ್‌ ಅಭಿಮಾನಿಗಳಲ್ಲಿ ಐಪಿಎಲ್ ಜ್ವರ ನಿಧಾನವಾಗಿ ಕಾವೇರ ತೊಡಗಿದೆ. ಈ ಸಲ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉಪನಾಯಕ ಸುರೇಶ್ ರೈನಾ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ.

ಆಗಸ್ಟ್ 29ರಂದ ವೈಯುಕ್ತಿಕ ಕಾರಣ ನೀಡಿ ಸುರೇಶ್ ರೈನಾ ದುಬೈನಿಂದ ಭಾರತಕ್ಕೆ ಮರಳಿದ್ದರು. ರೈನಾ ತವರಿಗೆ ದಿಢೀರ್ ಆಗಿ ಮರಳಿದ್ದರ ಬಗ್ಗೆ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡಿದ್ದವು. ಅಂತಿಮವಾಗಿ ಸುರೇಶ್ ರೈನಾ ತಾವು ತಮ್ಮ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ತವರಿಗೆ ಮರಳಿದ್ದಾಗಿ ತಿಳಿಸುವ ಮೂಲಕ ಎಲ್ಲಾ ಗಾಳಿಸುದ್ದಿಗಳಿಗೆ ತೆರೆ ಎಳೆದಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿನ ಹಿಂದೆ ರೈನಾ ಪಾತ್ರವನ್ನು ಯಾರು ಅಲ್ಲಗಳೆಯುವಂತಿಲ್ಲ. ರೈನಾ ಅನುಪಸ್ಥಿತಿ ಚೆನ್ನೈ ತಂಡವನ್ನು ಬಹುವಾಗಿ ಕಾಡಲಿದೆ ಎಂದರೆ ತಪ್ಪಾಗಲಾರದು. ರೈನಾ ಸ್ಥಾನವನ್ನು ತುಂಬುವ ಆಟಗಾರರ ಬಗ್ಗೆ ಚೆನ್ನೈ ಮೂಲದ ಫ್ರಾಂಚೈಸಿ ಸಾಕಷ್ಟು ತಲೆ ಕೆಡಿಸಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯವಾಗಿ ಗುರುತಿಸಿಕೊಂಡಿದ್ದ ರೈನಾ ಅನುಪಸ್ಥಿತಿಯ ಬಗ್ಗೆ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್‌ ತುಟಿಬಿಚ್ಚಿದ್ದಾರೆ.

IPL 2020: ಈ ಸಲ ಈ ತಂಡ ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಬ್ರೆಟ್ ಲೀ..!

ಸುರೇಶ್ ರೈನಾ ಅವರಂತಹ ಆಟಗಾರರ ಸ್ಥಾನವನ್ನು ಮತ್ತೊಬ್ಬ ಆಟಗಾರ ತುಂಬುವುದು ಕಷ್ಟಸಾಧ್ಯ. ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಪಂದ್ಯವನ್ನಾಡಿದ ಹಾಗೆಯೇ ಎರಡನೆ ಗರಿಷ್ಠ ರನ್ ಬಾರಿಸಿದ ಆಟಗಾರನೆಂದರೆ ಅದು ಸುರೇಶ್ ರೈನಾ ಎಂದು ವಾಟ್ಸನ್ ಹೇಳಿದ್ದಾರೆ.

ದುಬೈ ಪಿಚ್ ಸ್ಪಿನ್‌ಗೆ ನೆರವು ನೀಡುವ ಸಾಧ್ಯತೆಯಿದೆ. ಅದರಲ್ಲೂ ರೈನಾ ಸ್ಪಿನ್‌ಗೆ ಚೆನ್ನಾಗಿ ಆಡುತ್ತಿದ್ದರು. ಇದೀಗ ರೈನಾ ಅನುಪಸ್ಥಿತಿಯಲ್ಲಿ ಯುಎಇ ಪಿಚ್‌ನಲ್ಲಿ ಅವರ ಸ್ಥಾನವನ್ನು ಮುರುಳಿ ವಿಜಯ್ ಯಶಸ್ವಿಯಾಗಿ ತುಂಬಬಲ್ಲರು ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಸುರೇಶ್ ರೈನಾ ಅನುಪಸ್ಥಿತಿ ನಮ್ಮನ್ನು ಕಾಡಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಮುರುಳಿ ವಿಜಯ್ ಕೂಡಾ ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರ. ಅವರೊಬ್ಬ ಅದ್ಭುತ ಬ್ಯಾಟ್ಸ್‌ಮನ್. ಕಳೆದ ವರ್ಷ ಅವರು ಬೆಂಚ್ ಕಾಯಿಸಿದ್ದರು. ಈ ಸಲ ರೈನಾ ಅನುಪಸ್ಥಿತಿಯಲ್ಲಿ ಮುರುಳಿ ವಿಜಯ್‌ಗೆ ಮತ್ತಷ್ಟು ಅವಕಾಶಗಳು ಸಿಗುವ ಸಾಧ್ಯತೆಯಿದೆ ಎಂದು ವಾಟ್ಸನ್ ಹೇಳಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.