ಬೆಂಗಳೂರು(ಸೆ.10): ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್‌ ಬ್ರೆಟ್‌ ಲೀ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಚಾಂಪಿಯನ್ ಯಾರಾಗಬಹುದು ಎನ್ನುವ ಭವಿಷ್ಯ ನುಡಿದಿದ್ದಾರೆ. ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದೆ.

ಭಾರತದಲ್ಲಿ ನಡೆಯಬೇಕಿದ್ದ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಈ ಬಾರಿ ಕೊರೋನಾ ಭೀತಿಯಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಗೊಂಡಿದೆ. ಈ ಮೊದಲು ಮಾರ್ಚ್ 29ರಿಂದ ಐಪಿಎಲ್‌ ಆರಂಭಿಸಲು ಚಿಂತನೆ ಮಾಡಲಾಗಿತ್ತು. ಆದರೆ ಕೊರೋನಾ ಸೋಂಕು ದೇಶಾದ್ಯಂತ ವ್ಯಾಪಕವಾಗಿ ಹಬ್ಬಿದ್ದರಿಂದ ಟೂರ್ನಿಯನ್ನು ಯುಎಇಗೆ ಸ್ಥಳಾಂತರ ಮಾಡಲಾಯಿತು. ಇದೀಗ ಯುಎಇನ ಮೂರು ಸ್ಟೇಡಿಯಂಗಳಾದ ದುಬೈ, ಅಬಧಾಬಿ ಹಾಗೂ ಶಾರ್ಜಾದ ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿವೆ.

ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬರು 13ನೇ ಆವೃತ್ತಿಯ ಐಪಿಎಲ್ ಟ್ರೋಫಿಯನ್ನು ಯಾರು ಜಯಿಸಲಿದ್ದಾರೆ ಎಂದು ಆಸೀಸ್ ಮಾಜಿ ವೇಗಿಯನ್ನು ಪ್ರಶ್ನಿಸಿದ್ದಾರೆ. ಆಗ ಬ್ರೆಟ್‌ ಲೀ, ಈಗಲೇ ಹೇಳುವುದು ಕಷ್ಟ, ಆದಾಗಿಯೂ ಚೆನ್ನೈ ತಂಡ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದಾರೆ.

IPL 2020: ಪ್ರತಿ ತಂಡದ ಮೌಲ್ಯಯುತ ಆಟಗಾರನನ್ನು ಆಯ್ಕೆ ಮಾಡಿದ ಆಕಾಶ್ ಚೋಪ್ರಾ..!

13ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಬ್ಬರು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ. ಮಿಸ್ಟರ್ ಐಪಿಎಲ್ ಎಂದೇ ಕರೆಸಿಕೊಳ್ಳುವ ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ವೈಯುಕ್ತಿಕ ಕಾರಣದಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. 

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರು ಬಾರಿ ಐಪಿಎಲ್ ಚಾಂಪಿಯನ್ ಅಗಿ ಹೊರಹೊಮ್ಮಿದೆ. ಕಳೆದ ಆವೃತ್ತಿಯ ಐಪಿಎಲ್ ಫೈನಲ್‌ನಲ್ಲಿ ಸಿಎಸ್‌ಕೆ ತಂಡ ಕೂದಲೆಳೆ ಅಂತರದಲ್ಲಿ ದಾಖಲೆಯ ನಾಲ್ಕನೆಯ ಬಾರಿಗೆ ಕಪ್‌ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಇದೀಗ ಸೆಪ್ಟೆಂಬರ್ 19ರಂದು ಆರಂಭವಾಗಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡಲಿದೆ.