ಬೆಂಗಳೂರು(ಏ.14): ಕೊರೋನಾ ಭೀತಿಯಿಂದಾಗಿ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಈಗಾಗಲೇ 1.20 ಲಕ್ಷ ಮಂದಿ ಕೊರೋನಾ ವೈರಸ್‌ನಿಂದಾಗಿ ಜೀವ ಕಳೆದುಕೊಂಡಿದ್ದಾರೆ. ಇನ್ನು ಭಾರತದಲ್ಲೂ ಕೊರೋನಾ ವೈರಸ್ ಬಿಸಿ ತಟ್ಟಿದ್ದು, ಪ್ರಧಾನಿ ಮೋದಿ ಎರಡನೇ ಹಂತದ ಲಾಕ್‌ಡೌನ್ ಮೇ 03ರವರೆಗೆ ಘೋಷಿಸಿದ್ದಾರೆ.

ಇನ್ನು ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಕೂಡಾ ಮುಂದೂಡಲ್ಪಟ್ಟಿದೆ. ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಕೊರೋನಾ ವೈರಸ್ ಭೀತಿಯಿಂದಾಗಿ ಏಪ್ರಿಲ್ 15ರ ವರೆಗೆ ಮುಂದೂಡಲಾಗಿತ್ತು. ಇದೀಗ ಪ್ರಧಾನಿ ಮೋದಿ ಎರಡನೇ ಹಂತದಲ್ಲಿ 19 ದಿನಗಳ ಲಾಕ್‌ಡೌನ್ ಘೋಷಣೆ ಮಾಡಲಾಗಿದ್ದು, ಐಪಿಎಲ್ ಕೂಡಾ ಸದ್ಯಕ್ಕೆ ನಡೆಯುವುದು ಅನುಮಾನ ಎನಿಸಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಲೋಕಲ್ ಹೀರೋ ದೇವದತ್ ಪಡಿಕ್ಕಲ್ ಮನೆಯಲ್ಲೇ ಇರುವ ಮೂಲಕ ಕೊರೋನಾ ಮಣಿಸೋಣ ಎನ್ನುವ ಕರೆ ನೀಡಿದ್ದಾರೆ.

ನಾಕೌಟ್ ಪಂದ್ಯಗಳಲ್ಲಿ ಫೇಲ್ ಆಗುವ ಟಾಪ್ 5 ಸ್ಟಾರ್ ಆಟಗಾರರಿವರು

'ಎಲ್ಲರಿಗೂ ನಮಸ್ಕಾರ. ಎಲ್ಲರೂ ದಯವಿಟ್ಟು ಮನೆಯಲ್ಲೇ ಇರಿ. ಬಿಡುವಿನ ಸಮಯವನ್ನು ಮನೆಯಲ್ಲೇ ಇರುವುದರ ಮೂಲಕ ಎಂಜಾಯ್ ಮಾಡಿ. ಕುಟುಂಬದ ಜತೆ ಸಮಯವನ್ನು ಕಳೆಯಿರಿ, ಮೋವಿಗಳನ್ನು ನೋಡಿ, ಆರೋಗ್ಯವಾಗಿರಿ ಎಂದು ಪಡಿಕ್ಕಲ್ ಮನವಿ' ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.ದೇವದತ್ 2019ರಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಕರ್ನಾಟಕ ಪರ ಎಡಗೈ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ಪಡಿಕ್ಕಲ್ ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ 580 ರನ್ ಬಾರಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರಾಗಿ ಹೊರಹೊಮ್ಮಿದ್ದರು. ಇನ್ನು ವಿಜಯ್ ಹಜಾರೆ ಟ್ರೋಫಿಯಲ್ಲಿ 2 ಶತಕ ಸಹಿತ ಸಹಿತ 609 ರನ್ ಚಚ್ಚಿದ್ದರು. ಇನ್ನು ರಣಜಿ ಟ್ರೋಫಿಯಲ್ಲಿ 649 ರನ್ ಬಾರಿಸಿ ಮಿಂಚಿದ್ದರು. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಲಕ್ಷ ರುಪಾಯಿ ನೀಡಿ ತಮ್ಮ ತೆಕ್ಕೆಗೆ ಸೆಳೆದುಕೊಂಡಿತ್ತು.