ಮೆಲ್ಬರ್ನ್‌(ಜ.26): 2020ರ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರ ವಿಕೆಟ್‌ ಕೀಪರ್‌ ಆಗಿ ಎಬಿ ಡಿವಿಲಿಯ​ರ್ಸ್ ಕಾಣಿಸಿಕೊಳ್ಳಲಿದ್ದಾರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

IPL 2020: ಬಲಿಷ್ಠ RCB ತಂಡದಲ್ಲಿ ಯಾರಿಗೆಲ್ಲಾ ಸಿಗಲಿದೆ ಚಾನ್ಸ್..?

ಇದಕ್ಕೆ ಕಾರಣ, ಸದ್ಯ ಆಸ್ಪ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್‌ಬ್ಯಾಶ್‌ ಟಿ20 ಲೀಗ್‌ನಲ್ಲಿ ಎಬಿಡಿ ಕೀಪಿಂಗ್‌ ಮಾಡುತ್ತಿರುವುದು. ಬ್ರಿಸ್ಬೇನ್‌ ಹೀಟ್‌ ಪರ ಆಡುತ್ತಿರುವ ವಿಲಿಯ​ರ್ಸ್, ಶನಿವಾರ ನಡೆದ ಮೆಲ್ಬರ್ನ್‌ ಸ್ಟಾರ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ಆಕರ್ಷಕ ಸ್ಟಂಪಿಂಗ್‌, ಒಂದು ಕ್ಯಾಚ್‌ ಹಾಗೂ ಒಂದು ರನೌಟ್‌ ಮಾಡಿ ಗಮನ ಸೆಳೆದರು. ಜತೆಗೆ ತಮ್ಮ ಹಿಂದಿನ ದಿನಗಳನ್ನು ನೆನಪಿಸಿದರು. ಇದಕ್ಕೂ ಮುನ್ನ ಕೇವಲ 37 ಎಸೆತಗಳಲ್ಲಿ 6 ಸಿಕ್ಸರ್‌ನೊಂದಿಗೆ 71 ರನ್‌ ಸಿಡಿಸಿ ಪ್ರೇಕ್ಷಕರ ಮನ ಗೆದ್ದರು.

ಎಬಿಡಿ ಕಮ್‌ಬ್ಯಾಕ್ ವಿಚಾರ: ಕುತೂಹಲ ಹುಟ್ಟಿಸಿದ ನಾಯಕನ ಮಾತು..!

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಎಬಿಡಿ ಕೀಪರ್‌ ಆಗಿ ಕಾರ್ಯನಿರ್ವಹಿಸಿದರೆ ತಂಡದ ಅರ್ಧ ಸಮಸ್ಯೆ ಬಗೆಹರಿಯಲಿದೆ. ಎಬಿಡಿ ತಾವು ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸುಳಿವು ನೀಡಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗುತ್ತಿದೆ. ಒಂದು ವೇಳೆ ಎಬಿಡಿ 13ನೇ ಆವೃತ್ತಿಯ ಐಪಿಎಲ್‌ನಲ್ಲಿ ವಿಕೆಟ್ ಕೀಪಿಂಗ್ ಪಾತ್ರವನ್ನು ನಿಭಾಯಿಸಿದ್ದೇ ಆದರೆ ಕರ್ನಾಟಕದ ಯುವ ಪ್ರತಿಭೆ ದೇವದತ್ ಪಡಿಕ್ಕಲ್  ಆರ್‌ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಲಿದೆ. ಹೀಗಾದಲ್ಲಿ ಆರೋನ್ ಫಿಂಚ್ ಹಾಗೂ ಪಡಿಕ್ಕಲ್ ಇನಿಂಗ್ಸ್ ಆರಂಭಿಸಲಿದ್ದಾರೆ.