ನವದೆಹಲಿ(ನ.14): ಇತ್ತೀಚೆಗಷ್ಟೇ ಮುಕ್ತಾಯವಾದ 13ನೇ ಆವೃತ್ತಿ ಐಪಿಎಲ್‌ನಲ್ಲಿ ಯುವ ಬ್ಯಾಟ್ಸ್‌ಮನ್‌ಗಳ ಪೈಕಿ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನ ನೀಡಿ ಗಮನಸೆಳೆದಿದ್ದ ಆರ್‌ಸಿಬಿಯ ದೇವದತ್‌ ಪಡಿಕ್ಕಲ್‌ ಮುಂದೊಮ್ಮೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗುವ ಭರವಸೆ ಮೂಡಿಸಿದ್ದಾರೆ. 

ಕನ್ನಡಿಗ ದೇವದತ್ ಪಡಿಕ್ಕಲ್‌ಗೆ ಭಾರತ ತಂಡದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡುವ ಆಶಯ ಇದೆಯಂತೆ. ರಾಷ್ಟ್ರೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ಪಡಿಕ್ಕಲ್‌ ಹೀಗೆ ಹೇಳಿದ್ದಾರೆ. ಕ್ರಿಕೆಟರ್‌ ಒಬ್ಬನನ್ನು ಟೆಸ್ಟ್‌ ಕ್ರಿಕೆಟ್‌ ವ್ಯಾಖ್ಯಾನಿಸುತ್ತದೆ. ಅದೇ ಪ್ರತಿ ಕ್ರಿಕೆಟ್‌ ಆಟಗಾರನ ಅಂತಿಮ ಗುರಿಯಾಗಿರುತ್ತದೆ. ಮುಂದೊಂದು ದಿನ ಏನಾದರೂ ಮಾಡಲು ಬಯಸಿದ್ದರೆ, ಅದು ಭಾರತಕ್ಕಾಗಿ ಟೆಸ್ಟ್‌ ಕ್ರಿಕೆಟ್‌ ಆಡುವುದು ಎಂದು ಪಡಿಕ್ಕಲ್‌ ಹೇಳಿದ್ದಾರೆ.

IPL 2021: ಮೆಗಾ ಹರಾಜು ನಡೆದರೆ ಆರ್‌ಸಿಬಿ ಯಾರನ್ನು ಉಳಿಸಿಕೊಳ್ಳುತ್ತೆ?

2019-20ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸುವ ಮೂಲಕ ಗಮನ ಸೆಳೆದಿದ್ದಂತಹ 20 ವರ್ಷದ ಪಡಿಕ್ಕಲ್, 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕನಾಗಿ ಪಾದಾರ್ಪಣೆ ಮಾಡಿದರು. 2020ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಪಡಿಕ್ಕಲ್ 473 ರನ್ ಬಾರಿಸುವ ಮೂಲಕ ಆರ್‌ಸಿಬಿ ಪರ ಗರಿಷ್ಠ ರನ್ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. ಇದರ ಜತೆಗೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದಯೋನ್ಮುಕ ಆಟಗಾರ ಎನ್ನುವ ಗೌರವಕ್ಕೂ ಪಡಿಕ್ಕಲ್ ಭಾಜನರಾಗಿದ್ದಾರೆ.