ಮುಂಬೈ(ನ.14): ಐಪಿಎಲ್‌ ಮುಗಿಸಿ ಭಾರತಕ್ಕೆ ಮರಳುವ ವೇಳೆ ಪರವಾನಿಗೆಗಿಂತ ಅಧಿಕ ಚಿನ್ನಾಭರಣ ಹಾಗೂ ಇನ್ನಿತರೆ ಐಷಾರಾಮಿ ವಸ್ತುಗಳನ್ನು ತಂದಿರುವ ಆರೋಪದ ಮೇಲೆ ಮುಂಬೈ ಆಲ್ರೌಂಡರ್‌ ಕೃನಾಲ್‌ ಪಾಂಡ್ಯರನ್ನು ಏರ್‌ಪೋರ್ಟಲ್ಲಿ ಆದಾಯ ಇಲಾಖೆ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ವಿಚಾರಣೆ ನಡೆಸಿದ್ದರು. 

ಕೃನಾಲ್‌ ತಂದಿದ್ದ ಬ್ಯಾಗ್‌ಗಳನ್ನು ತಪಾಸಣೆಗೊಳಪಡಿಸಿದ ವೇಳೆ 1 ಕೋಟಿ ರುಪಾಯಿ ಮೌಲ್ಯದ ಚಿನ್ನಾಭರಣ ಮತ್ತು ದುಬಾರಿ ಬೆಲೆಯ ವಾಚ್‌ಗಳು ಇರುವುದನ್ನು ಪತ್ತೆ ಮಾಡಿರುವುದಾಗಿ ಡಿಆರ್‌ಐ ಮೂಲಗಳು ಮಾಹಿತಿ ನೀಡಿವೆ. ಈ ದುಬಾರಿ ವಸ್ತುಗಳ ಜೊತೆ ಬಿಸಿಸಿಐ ಆಟಗಾರರಿಗೆ ನೀಡಿದ ಗಿಫ್ಟ್‌ಗಳು ಇದ್ದವು ಎಂದು ಹೇಳಲಾಗಿದೆ. ಕೃನಾಲ್‌ ಇಂಡಿಗೋ ವಿಮಾನದಲ್ಲಿ ಆಗಮಿಸಿದ್ದರು ಎಂದು ಹೇಳಲಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡ 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಕೃನಾಲ್ ಪಾಂಡ್ಯ ಡೆಲ್ಲಿ ವಿರುದ್ಧ ಗೆಲುವಿನ ರನ್ ಬಾರಿಸಿ ಸಂಭ್ರಮಿಸಿದ್ದರು. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಲ್ರೌಂಡರ್ ಕೃನಾಲ್ ಪಾಂಡ್ಯ 12 ಇನಿಂಗ್ಸ್‌ಗಳಲ್ಲಿ 109 ರನ್ ಹಾಗೂ 6 ವಿಕೆಟ್ ಕಬಳಿಸಿದ್ದರು. 

ರೋಹಿತ್ ಶರ್ಮಾ ಬದಲು ಸೂರ್ಯಕುಮಾರ್ ಯಾದವ್‌ಗೆ ಚಾನ್ಸ್‌ ನೀಡಲು ಒತ್ತಾಯ
 
ಏರ್‌ಪೋರ್ಟನಲ್ಲಿನ ಆದಾಯ ಇಲಾಖೆ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ದುಬಾರಿ ಮೊತ್ತದ ಆಭರಣ ತಂದಿರುವ ಬಗ್ಗೆ ಕೃನಾಲ್ ಪಾಂಡ್ಯ ಅವರನ್ನು ವಿಚಾರಣೆಗೊಳಪಡಿಸಿದಾಗ, ಕೆಲವೊಂದು ರೂಲ್ಸ್‌ಗಳ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ತಾವು ಮಾಡಿದ ತಪ್ಪಿಗೆ ಅಧಿಕಾರಿಗಳ ಮುಂದೆ ಕ್ಷಮೆ ಕೋರಿದ್ದು, ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಆ ಬಳಿಕ ದಂಡ ಪಾವತಿಸಲು ಒಪ್ಪಿಕೊಂಡ ಬಳಿಕ ಮನೆಗೆ ತೆರಳಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ ಎಂದ ವರದಿಯಾಗಿದೆ.