ನವದೆಹಲಿ(ಆ.11): ಕ್ರಿಕೆಟ್‌ ಜಗತ್ತಿನಲ್ಲಿ ಅನೇಕ ಟಿ20 ಟೂರ್ನಿಗಳು ನಡೆದರೂ ಐಪಿಎಲ್‌ಗಿರುವಷ್ಟು ಜನಪ್ರಿಯತೆ ಬೇರಾರ‍ಯವ ಪಂದ್ಯಾವಳಿಗೂ ಇಲ್ಲ. ಹಲವು ದೇಶಗಳು ತಮ್ಮ ಟಿ20 ಲೀಗ್‌ಗಳಲ್ಲಿ ಐಪಿಎಲ್‌ ಮಾದರಿಯನ್ನು ಅನುಸರಿಸುತ್ತಿವೆ. 

ಆದರೆ ಶ್ರೀಲಂಕಾದಲ್ಲಿ ಹೊಸದಾಗಿ ಆರಂಭಗೊಳ್ಳುತ್ತಿರುವ ಲಂಕಾ ಪ್ರೀಮಿಯರ್‌ ಲೀಗ್‌ (ಎಲ್‌ಪಿಎಲ್‌) ಟಿ20 ಟೂರ್ನಿಯಲ್ಲಿ 5 ತಂಡಗಳಿಗೂ ಐಪಿಎಲ್‌ ತಂಡಗಳ ಹೆಸರುಗಳನ್ನೇ ನಕಲು ಮಾಡಿ ಇಡಲಾಗಿದೆ. ಕೊಲಂಬೊ ಸೂಪರ್‌ ಕಿಂಗ್ಸ್‌, ಗಾಲೆ ಲಯನ್ಸ್‌, ಕ್ಯಾಂಡಿ ರಾಯಲ್ಸ್‌, ಜಾಫ್ನಾ ಸನ್‌ರೈಸ​ರ್ಸ್, ದಾಂಬುಲಾ ಕ್ಯಾಪಿಟಲ್ಸ್‌ ಎಂದು ತಂಡಗಳಿಗೆ ನಾಮಕರಣ ಮಾಡಲಾಗಿದೆ. 

ಈ ಹೆಸರುಗಳು ಅನಾವರಣವಾಗುತ್ತಿದ್ದಂತೆ, ಅದೃಷ್ಟವಶಾತ್ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರನ್ನು ಕಾಫಿ ಮಾಡಿಲ್ಲ ಎಂದು ಓರ್ವ ಕ್ರಿಕೆಟ್ ಅಭಿಮಾನಿ ಟ್ವೀಟ್ ಮಾಡುವ ಮೂಲಕ ಕಾಲೆಳೆದಿದ್ದಾನೆ.

2021ರ ಐಪಿಎಲ್‌ ಮೆಗಾ ಹರಾಜು ಪ್ರಕ್ರಿಯೆ ರದ್ದು?

ಆಗಸ್ಟ್ 28ರಿಂದ ಸೆಪ್ಟೆಂಬರ್ 20ರ ವರೆಗೂ ಟೂರ್ನಿ ನಡೆಯಲಿದ್ದು, ಲಿಯಾಮ್ ಫ್ಲೆಂಕೆಟ್, ಡ್ವೇನ್ ಸ್ಮಿತ್, ಟಿಮ್ ಸೌಥಿ ಸೇರಿದಂತೆ 70 ಕ್ರಿಕೆಟಿಗರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಟೂರ್ನಿ ಆರಂಭದ ಕುರಿತಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿಲ್ಲ.

ಲಂಕಾ ಪ್ರೀಮಿಯರ್ ಲೀಗ್ ಒಂದು ಕಡೆಯಾದರೆ, ಕೆಲವು ಲಂಕಾದ ಆಟಗಾರರೇ ಈ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಏಕೆಂದರೆ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ವೇಳಾಪಟ್ಟಿ ಪ್ರಕಟವಾಗಿದ್ದು, ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ಯುಎಇನಲ್ಲಿ ಟೂರ್ನಿ ಜರುಗಲಿದೆ.