2021ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ರದ್ದು?
ಮುಂದಿನ ವರ್ಷ ಅಂದರೆ 2021ರಲ್ಲಿ ನಡೆಯಬೇಕಿದ್ದ ಮೆಗಾ ಐಪಿಎಲ್ ಆಟಗಾರರ ಹರಾಜನ್ನು ರದ್ದುಪಡಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಆ.11): ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷದ ಐಪಿಎಲ್ ವಿಳಂಬಗೊಂಡ ಕಾರಣ, 2021ರಲ್ಲಿ ನಡೆಯಬೇಕಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಮುಂದಿನ ವರ್ಷ ಎಲ್ಲಾ ತಂಡಗಳು, 3ರಿಂದ 4 ಆಟಗಾರರನ್ನು ಮಾತ್ರ ಉಳಿಸಿಕೊಂಡು ಇನ್ನುಳಿದ ಆಟಗಾರರನ್ನು ಬಿಟ್ಟು ಹೊಸದಾಗಿ ತಂಡ ರಚಿಸಿಕೊಳ್ಳಬೇಕಿತ್ತು. ಆದರೆ ಈ ವರ್ಷ ಎದುರಾಗಿರುವ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲು ತಂಡಗಳ ಮಾಲಿಕರಿಗೆ ಸಮಯಾವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಹೀಗಾಗಿ ಈಗಿನ ತಂಡಗಳನ್ನೇ ಮುಂದಿನ ಆವೃತ್ತಿಗೆ ಮುಂದುವರಿಸಲು ಅವಕಾಶ ಸಿಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
RCB ಕಪ್ ಗೆಲ್ಲಬೇಕೆಂದರೆ ವಿರಾಟ್ ಕೊಹ್ಲಿ ಭಾರ ಕಮ್ಮಿ ಮಾಡಿ: ಬ್ರೆಟ್ ಲೀ
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನವೆಂಬರ್ 10ಕ್ಕೆ ಮುಕ್ತಾಯವಾಗಲಿದೆ. ಇದಾಗಿ ನಾಲ್ಕುವರೆ ತಿಂಗಳ ಬಳಿಕ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಿದೆ. ಮೆಗಾ ಹರಾಜು ರದ್ದು ಪಡಿಸುವ ಬಿಸಿಸಿಐ ಚಿಂತನೆಗೆ ಐಪಿಎಲ್ ಫ್ರಾಂಚೈಸಿಗಳು ಸಮ್ಮತಿ ಸೂಚಿಸಿವೆ ಎನ್ನಲಾಗಿದೆ.
ಒಂದು ವೇಳೆ ಐಪಿಎಲ್ ಆಟಗಾರರ ಹರಾಜು ಮುಂದೂಡಲ್ಪಟ್ಟರೆ, ಮಿಚೆಲ್ ಸ್ಟಾರ್ಕ್, ಕಾಲಿನ್ ಡಿ ಗ್ರಾಂಡ್‌ಹೋಂ, ಶಾಯ್ ಹೋಪ್, ತಮೀಮ್ ಇಕ್ಬಾಲ್, ಶಕೀಬ್ ಅಲ್ ಹಸನ್, ಕಾಲಿನ್ ಮನ್ರೋ, ಬೆನ್ ಕಟ್ಟಿಂಗ್ಸ್ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಮತ್ತೊಂದು ವರ್ಷ ಕಾಯಬೇಕಾಗುತ್ತದೆ. ಈ ಎಲ್ಲಾ ಆಟಗಾರರು 2019ರಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದರು. ಈ ಪೈಕಿ ಸ್ಟಾರ್ಕ್ ಹರಾಜಿನಿಂದ ಹೊರಗುಳಿದಿದ್ದರು.