ದುಬೈ(ಸೆ.09): 2019ರ ಏಕದಿನ ವಿಶ್ವಕಪ್‌ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಎಂ.ಎಸ್‌.ಧೋನಿ, ಐಪಿಎಲ್‌ನಲ್ಲಿ ಮಿಂಚಲು ಸಿದ್ಧತೆ ನಡೆಸಿದ್ದಾರೆ. 

ನೆಟ್ಸ್‌ನಲ್ಲಿ ಸಾಮಾನ್ಯವಾಗಿ ವಿಕೆಟ್‌ ಕೀಪಿಂಗ್‌ ಅಭ್ಯಾಸ ನಡೆಸದ ಧೋನಿ, ಸದ್ಯ ಕೀಪಿಂಗ್‌ ಅಭ್ಯಾಸವನ್ನೂ ನಡೆಸುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. 

ಟೀಂ ಇಂಡಿಯಾ ಮಾಜಿ ಆಟಗಾರ ಇರ್ಫಾನ್‌ ಪಠಾಣ್‌, ‘ನೆಟ್ಸ್‌ನಲ್ಲಿ ಧೋನಿ ಕೀಪಿಂಗ್‌ ಅಭ್ಯಾಸ ನಡೆಸುವುದನ್ನು ತಾವೆಂದೂ ನೋಡಿಲ್ಲ. ನಾನು ಧೋನಿಯನ್ನು ಟೀಂ ಇಂಡಿಯಾ ಪರ ಹಾಗೂ ಸಿಎಸ್‌ಕೆ ಪರ ಆಡುವಾಗ ತುಂಬಾ ಹತ್ತಿರದಿಂದ ನೋಡಿದ್ದೇನೆ ಆದರೆ ಅವರು ಯಾವತ್ತೂ ವಿಕೆಟ್‌ ಕೀಪಿಂಗ್ ಅಭ್ಯಾಸ ಮಾಡುವುದನ್ನು ನೋಡಿರಲಿಲ್ಲ ಎಂದು ಹೇಳಿದ್ದಾರೆ.

ಬಹಳ ದಿನಗಳ ಬಳಿಕ ಕ್ರಿಕೆಟ್‌ಗೆ ಮರಳಿರುವ ಕಾರಣ, ಅಭ್ಯಾಸ ಮಾಡುತ್ತಿರಬಹುದು. ನನ್ನ ಪ್ರಕಾರ ಲೆಗ್‌ ಸ್ಪಿನ್ನರ್  ಬೌಲಿಂಗ್‌ಗೆ ವಿಕೆಟ್ ಕೀಪಿಂಗ್ ಅಭ್ಯಾಸ ನಡೆಸುತ್ತಿರಬಹುದು. ಒಟ್ಟಿನಲ್ಲಿ  ಅಭ್ಯಾಸದ ವೇಳೆ ಧೋನಿ ವಿಕೆಟ್‌ ಕೀಪಿಂಗ್ ನೋಡುವುದಕ್ಕೆ ಖುಷಿಯಾಗುತ್ತದೆ ಎಂದು ಸ್ಟಾರ್‌ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

8 ರಲ್ಲಿ 7 IPL ತಂಡದಲ್ಲಿ ವಿದೇಶಿ ಕೋಚ್: ಅಸಮಾಧಾನ ವ್ಯಕ್ತಪಡಿಸಿದ ಕುಂಬ್ಳೆ

ಕಳೆದ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಕಳೆದ ಆಗಸ್ಟ್ 15ರಂದು ದಿಢೀರ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿಸಲು ಸಾಕಷ್ಟು ಬೆವರು ಹರಿಸುತ್ತಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು ಉದ್ಘಾಟನಾ ಪಂದ್ಯದಲ್ಲಿ ಧೋನಿ ನೇತೃತ್ವದ ಸಿಎಸ್‌ಕೆ ತಂಡವು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.