ಮುಂಬೈ(ನ.14): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಸಿದ್ಧತೆಯಲ್ಲಿರುವ ಬಿಸಿಸಿಐ ಇನ್ನೆರಡು ಹೊಸ ತಂಡಗಳ ಸೇರ್ಪಡೆ ಹಾಗೂ ತಂಡಗಳಿಗೆ ನೀಡಲಾಗಿದ್ದ 4 ವಿದೇಶಿ ಆಟಗಾರರ ಮಿತಿಯನ್ನು 5ಕ್ಕೇರಿಸುವ ಬಗ್ಗೆ ಕಾರ್ಯಯೋಜನೆ ಸಿದ್ಧಪಡಿಸಿದೆ. 

ಅಲ್ಲದೆ, ಇನ್ನೆರಡು ತಂಡಗಳಿಗೆ ನಡೆಸಬೇಕಾದ ಆಟಗಾರರ ಹರಾಜು ಪ್ರಕ್ರಿಯೆಯನ್ನು ದೀಪಾವಳಿ ಮುಗಿಯುತ್ತಿದ್ದಂತೆ ನಡೆಸುವ ಕುರಿತು ತಯಾರಿ ಮಾಡಿಕೊಳ್ಳುತ್ತಿದೆ. ಅಂದುಕೊಂಡಂತೆ ಎಲ್ಲವೂ ನಡೆದಲ್ಲಿ 2021ರ ಐಪಿಎಲ್‌ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಟ್ರೋಫಿಗಾಗಿ ಕಾದಾಡಲಿವೆ. ಈಗಾಗಲೇ ಕೆಲವು ತಂಡಗಳು ಪ್ರದರ್ಶನದ ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ಹೆಣಗಾಡುತ್ತಿದ್ದು, ಈ ನಡುವೆ ಇನ್ನೆರಡು ತಂಡಗಳಿಗೂ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. 

14ನೇ ಐಪಿಎಲ್‌ಗೂ ಮುನ್ನ ಆರ್‌ಸಿಬಿಯಿಂದ ಈ 5 ಆಟಗಾರರಿಗೆ ಗೇಟ್‌ಪಾಸ್..!

ಹೀಗಾಗಿ ಬಿಸಿಸಿಐ ಸಮತೋಲನ ಕಾಪಾಡಿಕೊಳ್ಳುವ ಅವಕಾಶವನ್ನು ಎಲ್ಲಾ ತಂಡಗಳಿಗೆ ಮಾಡಿಕೊಡಬೇಕಿದೆ. ಹೀಗಾಗಿ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಬಿಸಿಸಿಐ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿದೆ.

ಐಪಿಎಲ್‌ನಲ್ಲಿ ತಂಡ ಸೇರ್ಪಡೆಗೆ ದ್ರಾವಿಡ್‌ ಒತ್ತಾಯ

ನವದೆಹಲಿ: ಐಪಿಎಲ್‌ ಕ್ರಿಕೆಟ್‌ ಯುವ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಹೀಗಾಗಿ ಐಪಿಎಲ್‌ನಲ್ಲಿ ಮತ್ತಷ್ಟು ತಂಡಗಳು ಸೇರ್ಪಡೆಯಾಗಿ ಹೆಚ್ಚಿನ ಯುವ ಪ್ರತಿಭೆಗಳಿಗೆ ಅವಕಾಶ ಸಿಗುವಂತಾಗಬೇಕು ಎಂದು ಎನ್‌ಸಿಎ ಮುಖ್ಯಸ್ಥ, ಭಾರತದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಒತ್ತಾಯ ಮಾಡಿದ್ದಾರೆ. 

ಹೊಸ ಪ್ರತಿಭೆಗಳು ಗುರುತಿಸುವಂತಾಗಲು ಐಪಿಎಲ್‌ನಂತಹ ಕ್ರಿಕೆಟ್‌ನಲ್ಲಿ ಯುವ ಆಟಗಾರರಿಗೆ ಹೆಚ್ಚೆಚ್ಚು ಅವಕಾಶ ದೊರೆಯಬೇಕು ಎಂದು ದ್ರಾವಿಡ್‌ ಹೇಳಿದ್ದಾರೆ.