ಶಾರ್ಜಾ(ಸೆ.28): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 9ನೇ ಪಂದ್ಯ ಸಾಕಷ್ಟು ಜಿದ್ದಾಜಿದ್ದಿನ ಹಾಗೂ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ನಿರೀಕ್ಷೆಯಂತೆಯೇ  ಸಿಕ್ಸರ್‌ಗಳ ಸುರಿಮಳೆ ಸುರಿದಿದೆ. 

ಫಾರ್ಮ್‌ನಲ್ಲಿರುವ ಕೆ.ಎಲ್. ರಾಹುಲ್, ಸಂಜು ಸ್ಯಾಮ್ಸನ್, ಮಯಾಂಕ್ ಅಗರ್‌ವಾಲ್ ಹಾಗೂ ಸ್ಟೀವ್ ಸ್ಮಿತ್ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಮಾಡಿದರು. ಇನ್ನು ಔಟ್ ಆಫ್ ಸಿಲೆಬಸ್ ಎನ್ನುವಂತೆ ಆಲ್ರೌಂಡರ್ ರಾಹುಲ್ ತೆವಾಟಿಯಾ ಕೊನೆಯಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಮಿಂಚಿನ ಬ್ಯಾಟಿಂಗ್ ನಡೆಸಿ ರಾಜಸ್ಥಾನ ಗೆಲುವಿಗೆ ಮೇಜರ್ ಟ್ವಿಸ್ಟ್ ತಂದುಕೊಟ್ಟರು.

ಮಯಾಂಕ್ ಅಗರ್‌ವಾಲ್ ಸಿಡಿಲಬ್ಬರದ ಶತಕ(50 ಎಸೆತಗಳಲ್ಲಿ 100 ರನ್) ಹಾಗೂ ರಾಹುಲ್ ಸಮಯೋಚಿತ ಅರ್ಧಶತಕದ ನೆರವಿನಿಂದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡ ನಿಗದಿತ 20 ಓವರ್‌ಗಳಲ್ಲಿ 223 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ರಾಜಸ್ಥಾನ ರಾಯಲ್ಸ್ ಆರಂಭಿಕ ಆಘಾತದ ಹೊರತಾಗಿಯೂ ನಾಯಕ ಸ್ಟೀವ್ ಸ್ಮಿತ್(27 ಎಸೆತಗಳಲ್ಲಿ 50 ರನ್) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್(42 ಎಸೆತಗಳಲ್ಲಿ 85) ರನ್ ಬಾರಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.

ಬೃಹತ್ ಟಾರ್ಗೆಟ್ ಚೇಸ್ ಮಾಡಿ ಗೆದ್ದ ರಾಜಸ್ಥಾನ, IPL ಇತಿಹಾಸದಲ್ಲೇ ದಾಖಲೆ!

ಪಂದ್ಯದ ದಿಕ್ಕನ್ನೇ ಬದಲಿಸಿದ ತೆವಾಟಿಯಾ: ಸ್ಟೀವ್ ಸ್ಮಿತ್ ವಿಕೆಟ್ ಪತನದ ಬಳಿಕ ಮೈದಾನಕ್ಕಿಳಿದ ರಾಹುಲ್ ತೆವಾಟಿಯಾ ಆರಂಭದಲ್ಲಿ ರನ್‌ ಗಳಿಸಲು ಪರದಾಡಿದರು. ಮೊದಲು 19 ಎಸೆತಗಳನ್ನು ಎದುರಿಸಿ ತೆವಾಟಿಯಾ ಕೇವಲ 8 ರನ್‌ಗಳನ್ನಷ್ಟೇ ಬಾರಿಸಿದ್ದರು. ಆದರೆ 18ನೇ ಓವರ್‌ನಲ್ಲಿ ಶೆಲ್ಡನ್ ಕಾಟ್ರೆಲ್‌ ಅವರ ಬೌಲಿಂಗ್‌ನಲ್ಲಿ ಬರೋಬ್ಬರಿ 5 ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನೆಲ್ಲ ತಲೆಕೆಳಗಾಗುವಂತೆ ಮಾಡಿದರು. ಇನ್ನು 3 ಎಸೆತಗಳು ಬಾಕಿ ಇರುವಂತೆಯೇ ರಾಜಸ್ಥಾನ ರಾಯಲ್ಸ್ ತಂಡ ಗೆಲುವಿನ ನಗೆ ಬೀರಿತು.

ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಟ್ರೆಂಡ್ ಆದ ಟಾಪ್ ಮೀಮ್ಸ್‌ಗಳು ಇಲ್ಲಿವೆ ನೋಡಿ...