ಶಾರ್ಜಾ(ಸೆ.27):  ಕಿಂಗ್ಸ್ ಇಲೆವೆನ್ ಪಂಜಾಬ್ ಬೃಹತ್ ಮೊತ್ತ ಸಿಡಿಸಿ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ರಾಜಸ್ಥಾನ ರಾಯಲ್ಸ್ ತಂಡದ ದಿಟ್ಟ ಹೋರಾಟದಿಂದ ಪಂಜಾಬ್ ಬೃಹತ್ ಮೊತ್ತವನ್ನು ರಾಜಸ್ಥಾನ ರಾಯಲ್ಸ್ ಚೇಸ್ ಮಾಡಿದೆ. ಆರಂಭದಲ್ಲಿ ಸಂಜು ಸಾಮ್ಸನ್ ಹಾಗೂ ನಾಯಕ ಸ್ಟೀವ್ ಸ್ಮಿತ್ ಅಬ್ಬರಿಸಿದರೆ. ಅಂತಿಮ ಹಂತದಲ್ಲಿ ರಾಹುಲ್ ಟಿವಾಟಿಯಾ ಬ್ಯಾಟಿಂಗ್ ಸ್ವರೂಪವನ್ನೇ ಬದಲಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್  4 ವಿಕೆಟ್ ಗೆಲುವು ಸಾಧಿಸಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಚೇಸ್ ಮಾಡಿದ ದಾಖಲೆ ಬರೆಯಿತು. ಇದಕ್ಕೂ ಮುಂಚೆ ರಾಜಸ್ಥಾನ ರಾಯಲ್ಸ್ ತಂಡವೇ 215 ರನ್ ಚೇಸ್ ಮಾಡಿ ದಾಖಲೆ ಬರೆದಿತ್ತು. ಇದೀಗ ತನ್ನದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ.

224ರನ್ ಬೃಹತ್ ಟಾರ್ಗೆಟ್ ಚೇಸ್ ಮಾಡಲು ರಾಜಸ್ಥಾನ ರಾಯಲ್ಸ್ ಕೂಡ ಸಜ್ಜಾಯಿತು. ಆದರೆ ಆರಂಭದಲ್ಲೇ ಜೋಸ್ ಬಟ್ಲರ್ ವಿಕೆಟ್ ಪತನಗೊಂಡಿತು. ಇತ್ತ ಪಂಜಾಬ್ ಪಡೆಯಲ್ಲಿ ಸಂಭ್ರಮ ಮನೆ ಮಾಡಿತು. ಆದರೆ ನಾಯಕ ಸ್ಟೀವ್ ಸ್ಮಿತ್ ಹಾಗೂ ಸಂಜು ಸಾಮ್ಸನ್ ಬ್ಯಾಟಿಂಗ್ ನೋಡಿದ ಪಂಜಾಬ್ ತಂಡದಲ್ಲಿ ಆತಂಕ ಮನೆ ಮಾಡಿತು. 

ಕಿಂಗ್ಸ್ ಇಲೆವೆನ್ ಪಂಜಾಬ್‌ಗಿಂತ ವೇಗವಾಗಿ ರಾಜಸ್ಥಾನ ರಾಯಲ್ಸ್ ರನ್ ಕಲೆ ಹಾಕಿತು. ಪಂಜಾಬ್ ತಂಡ ಪವರ್ ಪ್ಲೇ ಓವರ್‌ಗಳಲ್ಲಿ 60 ರನ್ ಸಿಡಿಸಿ ದಾಖಲೆ ಬರೆದಿತ್ತು. ಆದರೆ ರಾಜಸ್ಥಾನ ಈ ದಾಖಲೆ ಪುಡಿ ಮಾಡಿ ಪವರ್ ಪ್ಲೇನಲ್ಲಿ 69 ರನ್ ಸಿಡಿಸಿತು. ಸ್ಮಿತ್ ಹಾಗೂ ಸ್ಯಾಮ್ಸನ್ ಜೊತೆಯಾಟದಿಂದ ರಾಜಸ್ಥಾನ ರಾಯಲ್ಸ್ ಬೃಹತ್ ಮೊತ್ತ ಚೇಸ್ ಮಾಡೋ ಸೂಚನೆ ನೀಡಿತು.

ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಸ್ಟೀವ್ ಸ್ಮಿತ್ ವಿಕೆಟ್ ಪತನಗೊಂಡಿತು. ಸ್ಮಿತ್ 27 ಎಸೆತದಲ್ಲಿ 50 ರನ್ ಸಿಡಿಸಿದರು. ಇತ್ತ ಸಂಜು ಸ್ಯಾಮ್ಸನ್ ತಂಡಕ್ಕೆ ಆಸರೆಯಾದರು. ಆದರೆ ರಾಹುಲ್ ಟಿವಾಟಿಯಾ ರನ್ ಗಳಿಸಲು ಪರದಾಡಿದರು. ಇದು ರಾಜಸ್ಥಾನ ತಂಡಕ್ಕೆ ತೀವ್ರ ಹೊಡೆತ ನೀಡಿತು. ಆದರೆ ಸ್ಯಾಮ್ಸನ್ ಸಿಕ್ಸರ್ ಮೂಲಕವೇ ಅಬ್ಬರಿಸಿದರು. ಅಂತಿಮ 24 ಎಸೆತದಲ್ಲಿ ರಾಜಸ್ಥಾನ ಗೆಲುವಿಗೆ 63 ರನ್ ಬೇಕಿತ್ತು. 

ಸ್ಫೋಟಕ ಇನ್ನಿಂಗ್ಸ್ ಮೂಲಕ ಪಂಜಾಬ್‌ಗೆ ನಡುಕ ಹುಟ್ಟಿಸಿದ ಸಂಜು ಸ್ಯಾಮ್ಸನ್ 42 ಎಸೆತದಲ್ಲಿ 85 ರನ್ ಸಿಡಿಸಿ ಔಟಾದರು. ಮೊಹಮ್ಮದ್ ಶಮಿ ಸ್ಯಾಮ್ಸನ್ ಅಬ್ಬರಕ್ಕೆ ಬ್ರೇಕ್ ಹಾಕಿದರು.  ರನ್ ಗಳಿಸಲು ತಿಣುಕಾಡಿದ್ದ ರಾಹುಲ್ ಟಿವಾಟಿಯಾ ಒಂದೇ ಸಮನೆ ಅಬ್ಬರಿಸಿದರು. ಒಂದೇ ಓವರ್‌ನಲ್ಲಿ 5  ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. 

ರಾಹುಲ್ ಟಿವಾಟಿಯ ಅಬ್ಬರಿಂದ ರಾಯಲ್ಸ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 21 ರನ್ ಅವಶ್ಯಕತೆ ಇತ್ತು. ಆದರೆ 9ರನ್ ಸಿಡಿಸಿದ ರಾಬಿನ್ ಉತ್ತಪ್ಪ ವಿಕೆಟ್ ಪತನಗೊಂಡಿತು. ಆದರೆ ಜೋಫ್ರಾ ಅರ್ಚರ್ ಸಿಕ್ಸರ್ ಇನಿಂಗ್ಸ್ ಆರಂಭಿಸಿದರು.  ಟಿವಾಟಿಯಾ 31 ಎಸೆತದಲ್ಲಿ 51 ರನ್ ಸಿಡಿಸಿ ಔಟಾದರು. ಈ ವೇಳೆ ರಾಯಲ್ಸ್ ಗೆಲುವಿಗೆ ಅಂತಿಮ 6 ಎಸೆತದಲ್ಲಿ ಕೇವಲ 2 ರನ್ ಅವಶ್ಯಕತೆ ಇತ್ತು.

ರಿಯಾನ್ ಪರಾಗ್ ವಿಕೆಟ್ ಪತನಗೊಂಡಿತು. ಆದರೆ ಟಾಮ್ ಕುರನ್ ಸಿಡಿಸಿದ ಬೌಂಡರಿ ನೆರವಿನಿಂದ ರಾಜಸ್ಥಾನ ರಾಯಲ್ಸ್ ಇನ್ನು 2 ಎಸೆತ ಬಾಕಿ ಇರುವಂತೆ 4 ವಿಕೆಟ್ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತ ಗುರಿ ಬೆನ್ನಟ್ಟಿದ ದಾಖಲೆ ಬರೆಯಿತು.