ಮುಂಬೈ(ಸೆ.26) ಕ್ರಿಕೆಟ್‌ ಲೋಕದ ದಂತಕತೆ ಸುನಿಲ್‌ ಗವಾಸ್ಕರ್‌ ಅವರು ಐಪಿಎಲ್‌ ಪಂದ್ಯಾವಳಿಯ ಕಮೆಂಟ್ರಿ ಹೇಳುವ ವೇಳೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಟೀಮ್‌ನ ನಾಯಕ ವಿರಾಟ್‌ ಕೊಹ್ಲಿ ಬಗ್ಗೆ ಆಡಿದ ಮಾತೊಂದು ತೀವ್ರ ವಿವಾದ ಸೃಷ್ಟಿಸಿದೆ. ಕೊಹ್ಲಿ ಪತ್ನಿ, ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಕೂಡ ಗವಾಸ್ಕರ್‌ ಅವರ ಹೇಳಿಕೆಗೆ ಸ್ಪಷ್ಟನೆ ಕೇಳಿದ್ದರು. ಆದರೆ ತಾವು ಯಾವುದೇ ಕೀಳು ಹೇಳಿಕೆ ನೀಡಿಲ್ಲ. ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಗವಾಸ್ಕರ್‌ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಗವಾಸ್ಕರ್‌, ನಾನು ಕೊಹ್ಲಿ ಅಥವಾ ಅನುಷ್ಕಾ ಬಗ್ಗೆ ಕೀಳಾಗಿ ಮಾತನಾಡಿಲ್ಲ. ಜೊತೆಗೆ ಕೊಹ್ಲಿ ವೈಫಲ್ಯಕ್ಕೆ ಎಲ್ಲೂ ಅನುಷ್ಕಾ ಕಾರಣ ಎಂದೂ ದೂಷಿಸಿಲ್ಲ. ಈ ಹಿಂದೆ ಬಿಡುಗಡೆಯಾಗಿದ್ದ ವಿಡಿಯೋದಲ್ಲಿ ಅನುಷ್ಕಾ ಬೌಲಿಂಗ್‌ಗೆ ಕೊಹ್ಲಿ ಬ್ಯಾಟಿಂಗ್‌ ಮಾಡಿದ್ದನ್ನು ಉದ್ದೇಶಿಸಿ, ಲಾಕ್ಡೌನ್‌ ವೇಳೆ ಜನ ಮನೆಯಲ್ಲಿ ಖುಷಿಗಾಗಿ ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡಿರುತ್ತಾರೆ ಎಂದಷ್ಟೇ ಹೇಳಿದ್ದೇನೆ. ಅದನ್ನು ಯಾರಾದರೂ ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಅದಕ್ಕೆ ನಾನು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಗುರುವಾರ ಕಿಂಗ್ಸ್‌ ಇಲೆವನ್ ಪಂಜಾಬ್‌ ಟೀಮ್‌ ಜೊತೆ ನಡೆದ ಐಪಿಎಲ್‌ ಪಂದ್ಯದಲ್ಲಿ ಕೊಹ್ಲಿ ಎರಡು ಕ್ಯಾಚ್‌ ಬಿಟ್ಟಿದ್ದರು. ನಂತರ ಕೇವಲ ಒಂದು ರನ್‌ ಹೊಡೆದು ಔಟ್‌ ಆಗಿದ್ದರು. ಈ ವೇಳೆ ಕಮೆಂಟ್ರಿ ಹೇಳುತ್ತಿದ್ದ ಗವಾಸ್ಕರ್‌, ಕೊರೋನಾ ಲಾಕ್ಡೌನ್‌ ವೇಳೆ ವೈರಲ್‌ ಆಗಿದ್ದ ಅನುಷ್ಕಾ ಮತ್ತು ವಿರಾಟ್‌ ಕ್ರಿಕೆಟ್‌ ಆಡುತ್ತಿದ್ದ ವಿಡಿಯೋವನ್ನುದ್ದೇಶಿಸಿ ‘ಇವರು ಲಾಕ್‌ಡೌನ್‌ನಲ್ಲಿ ಕೇವಲ ಅನುಷ್ಕಾ ಬೌಲಿಂಗ್‌ ಜೊತೆ ಪ್ರಾಕ್ಟೀಸ್‌ ಮಾಡಿದ್ದಾರೆ’ ಎಂದಿದ್ದರು. ಇದು ಡಬಲ್‌ ಮೀನಿಂಗ್‌ ಹೇಳಿಕೆ ಎಂದು ಕೊಹ್ಲಿ ಅಭಿಮಾನಿಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಅನುಷ್ಕಾ **** ಜತೆ ಅಭ್ಯಾಸ ಮಾಡಿದ್ದಾರೆ ಎಂದ ಗವಾಸ್ಕರ್..! ಕಿಡಿಕಾರಿದ ಅನುಷ್ಕಾ

ಗವಾಸ್ಕರ್ ಅವರ ಈ ಹೇಳಿಕೆಗೆ ಕೊಹ್ಲಿ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗವಾಸ್ಕರ್‌ ಅವರನ್ನು ಕಮೆಂಟ್ರಿ ಪ್ಯಾನಲ್‌ನಿಂದ ಬಿಸಿಸಿಐ ಕಿತ್ತುಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅನುಷ್ಕಾ ಶರ್ಮಾ, ‘2020 ಬಂದರೂ ನನ್ನನ್ನು ಅನಗತ್ಯವಾಗಿ ಕ್ರಿಕೆಟ್‌ನ ವಿವಾದಗಳಿಗೆ ಎಳೆಯುವುದು ನಿಂತಿಲ್ಲ. ಗವಾಸ್ಕರ್‌ ಅವರೇ, ನಿಮ್ಮ ಹೇಳಿಕೆ ಕೀಳು ಅಭಿರುಚಿಯಿಂದ ಕೂಡಿದೆ. ಅದರ ಬಗ್ಗೆ ದಯವಿಟ್ಟು ಸ್ಪಷ್ಟನೆ ಕೊಡಿ. ಗಂಡನ ಆಟದ ಬಗ್ಗೆ ಹೆಂಡತಿಯನ್ನು ಏಕೆ ದೂಷಿಸುತ್ತೀರಾ? ಇಷ್ಟುವರ್ಷ ನೀವು ಕ್ರಿಕೆಟಿಗರ ಖಾಸಗಿ ಬದುಕನ್ನು ಗೌರವಿಸಿದ್ದೀರಿ. ನಮ್ಮ ಬಗ್ಗೆಯೂ ಆ ಗೌರವ ಇರಬೇಕಲ್ಲವೇ? ಕ್ರಿಕೆಟ್‌ನಲ್ಲಿ ನೀವೊಬ್ಬರು ದಂತಕತೆ. ಆದರೆ, ನಿಮ್ಮ ಮಾತು ಕೇಳಿ ನೋವಾಯಿತು’ ಎಂದಿದ್ದಾರೆ.