ಕೊಹ್ಲಿ ಅನುಷ್ಕಾ **** ಜತೆ ಅಭ್ಯಾಸ ಮಾಡಿದ್ದಾರೆ ಎಂದ ಗವಾಸ್ಕರ್..! ಕಿಡಿಕಾರಿದ ಅನುಷ್ಕಾ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಟೀಕಿಸುವ ಭರದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಏನದು ವಿವಾದ, ಅನುಷ್ಕಾ ಕಿಡಿಕಾರಿದ್ದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ದುಬೈ(ಸೆ.25): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಕ್ರಿಕೆಟ್ ದಿಗ್ಗಜ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನು ಟೀಕಿಸುವ ಭರದಲ್ಲಿ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಹೌದು, ವಿರಾಟ್ ಕೊಹ್ಲಿಯನ್ನು ಟೀಕಿಸುವುದರ ಜತೆಗೆ ಪತ್ನಿ ಅನುಷ್ಕಾ ಶರ್ಮಾ ಅವರ ಹೆಸರನ್ನು ಪ್ರಸ್ತಾಪಿಸಿದ್ದು, ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪಂಜಾಬ್ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎರಡು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಇದಾದ ಬಳಿಕ ವೀಕ್ಷಕ ವಿವರಣೆ ನೀಡುತ್ತಿದ್ದ ಗವಾಸ್ಕರ್ ಅಶ್ಲೀಲ ಪದವೊಂದನ್ನು ಬಳಸಿದ್ದಾರೆ ಎನ್ನಲಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರ ಚೆಂಡುಗಳನ್ನು(ಬೌಲಿಂಗ್‌ನ್ನು) ಮಾತ್ರ ಅಭ್ಯಾಸ ನಡೆಸಿದ್ದಾರೆ. ಆ ವಿಡಿಯೋವನ್ನು ನಾನು ನೋಡಿದ್ದೇನೆ. ಅದರಿಂದ ಏನೂ ಪ್ರಯೋಜನವಾಗುವುದಿಲ್ಲ.
RCB ವಿರುದ್ಧ ಪಂಜಾಬ್ ದಿಗ್ವಿಜಯ: ವಿರಾಟ್ ಪಡೆ ಎಡವಿದ್ದೆಲ್ಲಿ..?
ಲಾಕ್‌ಡೌನ್ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಕ್ರಿಕೆಟ್ ಅಭ್ಯಾಸ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಉಲ್ಲೇಕಿಸಿ ಗವಾಸ್ಕರ್ ಈ ಕಾಮೆಂಟ್ ಮಾಡಿದ್ದರು.
ಈ ಕಾಮೆಂಟ್ ಮಾಡಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅಭಿಮಾನಿಗಳು ಬಿಸಿಸಿಐಗೆ ಗವಾಸ್ಕರ್ ಅವರನ್ನು ಕಾಮೆಂಟೇಟರಿ ಪ್ಯಾನಲ್‌ನಿಂದ ಕೈಬಿಡಿ ಎಂದು ಆಗ್ರಹಿಸಿದ್ದಾರೆ.
ಇನ್ನು ಗವಾಸ್ಕರ್ ಅವರ ಕಾಮೆಂಟ್‌ಗೆ ಸ್ವತಃ ಅನುಷ್ಕಾ ಶರ್ಮಾ ಕೂಡಾ ತಿರುಗೇಟು ನೀಡಿದ್ದಾರೆ. ಸನ್ಮಾನ್ಯ ಗವಾಸ್ಕರ್ ಅವರೇ ನಿಮ್ಮ ಆ ಹೇಳಿಕೆ ಅಸಹ್ಯಕರವಾದುದಾಗಿದೆ. ಯಾಕೆ ಹೀಗೆ ಹೇಳಿದಿರಿ ಎನ್ನುವುದರ ವಿವರಣೆಯನ್ನು ನಿಮ್ಮ ಬಾಯಿಂದಲೇ ಕೇಳಲು ಬಯಸುತ್ತೇನೆ. ಕಳೆದ ಕೆಲವು ವರ್ಷಗಳಿಂದ ಪ್ರತಿ ಕ್ರಿಕೆಟಿಗರ ಹಾಗೂ ಅವರ ಕುಟುಂಬದ ಖಾಸಗಿತನವನ್ನು ನೀವು ಗೌರವಿತ್ತೀರಿ ಎಂದು ಭಾವಿಸುತ್ತೇನೆ. ನಿಮಗೆಷ್ಟು ಸಮಾಜದಲ್ಲಿ ಗೌರವವಿದೆಯೋ, ನಮಗೂ ಅಷ್ಟೇ ಗೌರವವಿದೆ ಎಂದು ನಿಮಗೆ ಅನಿಸುವುದಿಲ್ಲವೇ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಎರಡು ಬಾರಿ ಕೆ.ಎಲ್. ರಾಹುಲ್ ಅವರ ಕ್ಯಾಚ್ ಬಿಟ್ಟಿದ್ದರು. 17ನೇ ಓವರ್‌ನಲ್ಲಿ ರಾಹುಲ್ 83 ರನ್ ಗಳಿಸಿದ್ದಾಗ ಹಾಗೆಯೇ 18ನೇ ಓವರ್‌ನಲ್ಲಿ 89 ರನ್ ಗಳಿಸಿದ್ದಾಗ ಕೊಹ್ಲಿ ಕ್ಯಾಚ್ ಕೈಚೆಲ್ಲಿದ್ದರು. ಅಂತಿಮವಾಗಿ ರಾಹುಲ್ 69 ಎಸೆತಗಳಲ್ಲಿ ಅಜೇಯ 132 ರನ್ ಬಾರಿಸಿದ್ದರು. ಅಂದಹಾಗೆ ಇದು ಐಪಿಎಲ್‌ನಲ್ಲಿ ಭಾರತೀಯ ಆಟಗಾರನೊಬ್ಬ ಬಾರಿಸಿದ ವೈಯುಕ್ತಿಕ ಗರಿಷ್ಠ ಮೊತ್ತ ಕೂಡಾ ಹೌದು.