ದುಬೈ(ಅ.05): 4 ಪಂದ್ಯಗಳಲ್ಲಿ ತಲಾ 3 ಗೆಲುವು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೋಮವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಎದುರಾಗಲಿವೆ. 

"

ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಆರ್‌ಸಿಬಿ 2ನೇ ಪಂದ್ಯದಲ್ಲಿ ಸೋತಿತ್ತು. ನಂತರದ ಎರಡೂ ಪಂದ್ಯವನ್ನು ಕೊಹ್ಲಿ ಬಳಗ ಜಯ ಸಾಧಿಸಿದೆ. ಇದೀಗ ಡೆಲ್ಲಿ ವಿರುದ್ಧ ಮತ್ತೊಂದು ಜಯದೊಂದಿಗೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. ದುಬೈ ಅಂಗಳದಲ್ಲಿ ಆರ್‌ಸಿಬಿ 3 ಪಂದ್ಯವನ್ನಾಡಿದ್ದು, 2 ಗೆಲುವು ಪಡೆದಿದೆ. 

ಆರ್‌ಸಿಬಿ ತಂಡ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದ್ದರೂ ಡೆತ್ ಬೌಲಿಂಗ್ ಸಮಸ್ಯೆ ಇದ್ದೇ ಇದೆ. ಆದರೂ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬೌಲರ್ ಗಳು ಕರಾರುವಕ್ ದಾಳಿ ಸಂಘಟಿಸಿದ್ದರು. ಸ್ಪಿನ್ನರ್ ಚಹಲ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ವೇಗಿ ಸೈನಿ ಮೇಡನ್ ವಿಕೆಟ್ ಪಡೆದಿದ್ದರು. ಪಡಿಕ್ಕಲ್, ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಲಯದಲ್ಲಿದ್ದಾರೆ. ಫಿಂಚ್ ಸ್ಥಿರತೆ ಕಾಯ್ದುಕೊಳ್ಳಬೇಕಿದೆ. ಚಹಲ್ ಸ್ಪಿನ್ ಅಸ್ತ್ರ ತಂಡಕ್ಕೆ ವರದಾನವಾಗಿದೆ. 

IPL 2020: 2ನೇ ವಾರದಲ್ಲಿ RCB ತಂಡದಲ್ಲಿ ಯಾರು ಪಾಸ್? ಯಾರು ಫೇಲ್?

ಇನ್ನು ಡೆಲ್ಲಿ ತಂಡ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಪೃಥ್ವಿ ಶಾ, ಶ್ರೇಯಸ್, ಪಂತ್ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ವೇಗಿ ರಬಾಡ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದು, ಸ್ಪಿನ್ನರ್ ಅಶ್ವಿನ್ ಹಾಗೂ ಮಿಶ್ರಾ ಲಯದಲ್ಲಿದ್ದಾರೆ.

ಪಿಚ್ ರಿಪೋರ್ಟ್ ಈ ಐಪಿಎಲ್‌ನಲ್ಲಿ ದುಬೈ ಕ್ರೀಡಾಂಗಣ 7 ಪಂದ್ಯಗಳಿಗೆ ವೇದಿಕೆಯಾಗಿದ್ದು, 7ರಲ್ಲೂ ಮೊದಲು ಬ್ಯಾಟ್ ಮಾಡಿದ ತಂಡವೇ ಗೆಲುವು ಸಾಧಿಸಿದೆ. 2 ಬಾರಿ 200ಕ್ಕೂ ಹೆಚ್ಚು ಮೊತ್ತ ದಾಖಲಾಗಿದ್ದರೂ, 170-180 ಸುರಕ್ಷಿತ ಮೊತ್ತ ಎಂದೇ ಪರಿಗಣಿಸಲಾಗಿದೆ. ವೇಗಿಗಳಿಗೆ ಹೆಚ್ಚಿನ ನೆರವು ಸಿಗಲಿದೆ. ಟಾಸ್ ಪ್ರಮುಖ ಪಾತ್ರವಹಿಸಲಿದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್