ಡೆಲ್ಲಿ ಸೋಲಿಸಿ IPL 2020 ಫೈನಲ್ ಪ್ರವೇಶಿಸಿದ ಮುಂಬೈ!
IPL 2020 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದೀಗ ಮುಂಬೈ ಫೈನಲ್ ಪಂದ್ಯದ ಎದುರಾಳಿ ಯಾರು ಅನ್ನೋ ಕುತೂಹಲ ಮನೆ ಮಾಡಿದೆ. 1ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಮುಂಬೈ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.
ದುಬೈ(ನ.05): 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್, 57 ರನ್ ಗೆಲುವು ದಾಖಲಿಸಿತು. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಮುಂಬೈ 6ನೇ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು. ಇತ್ತ ಸೋತ ತಂಡ ಡೆಲ್ಲಿ, 2ನೇ ಕ್ವಾಲಿಫೈಯರ್ ಮೂಲಕ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶ ಪಡೆದಿದೆ.
ಗೆಲುವಿಗೆ 201 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಟ್ರೆಂಟ್ ಬೋಲ್ಟ್ ಹಾಗೂ ಜಸ್ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿತು. ಡೆಲ್ಲಿ ಕ್ಯಾಪಿಟಲ್ಸ್ ರನ್ ಖಾತೆ ತೆರೆಯುವ ಮೊದಲೇ 3 ವಿಕೆಟ್ ಕಳೆದುಕೊಂಡು ಪರದಾಡಿತು. ಪೃಥ್ವಿ ಶಾ, ಶಿಖರ್ ಧವನ್ ಹಾಗೂ ಅಜಿಂಕ್ಯ ರಹಾನೆ ಶೂನ್ಯಕ್ಕೆ ಔಟಾದರು.
ನಾಯಕ ಶ್ರೇಯಸ್ ಅಯ್ಯರ್ 12 ರನ್ ಸಿಡಿಸಿ ಔಟಾದರು. ಇತ್ತ ಮಾರ್ಕಸ್ ಸ್ಟೊಯ್ನಿಸ್ ಹೋರಾಟ ನೀಡಿದರೆ, ಇತರ ಯಾವ ಬ್ಯಾಟ್ಸ್‌ಮನ್ ಕೂಡ ಅಬ್ಬರಿಸಲಿಲ್ಲ. ರಿಷಬ್ ಪಂತ್ ಕೇವಲ 3 ರನ್ ಸಿಡಿಸಿ ಔಟಾದರು. ಅಕ್ಸರ್ ಪೇಟಲ್ ಉತ್ತಮ ಸಾಥ್ ನೀಡಿದರು. ಸ್ಟೊಯ್ನಿಸ್ ಹಾಗೂ ಅಕ್ಸರ್ ಪಟೇಲ್ ಜೊತೆಯಾಟದಿಂದ ಡೆಲ್ಲಿ 100 ರನ್ ಗಡಿ ದಾಟಿತು.
ಮಾರ್ಕಸ್ ಸ್ಟೊಯ್ನಿಸ್ 65 ರನ್ ಸಿಡಿಸಿ ನಿರ್ಗಮಿಸಿದರು. ಅಕ್ಸರ್ ಪಟೇಲ್ ಸೋಲಿನ ಅಂತರ ಕಡಿಮೆ ಮಾಡುವ ಪ್ರಯತ್ನ ಮಾಡಿದರು. ಅಂತಿಮವಾಗಿ ಡೆಲ್ಲಿ ನಷ್ಟಕ್ಕೆ ರನ್ ಸಿಡಿಸಿತು. ಅಕ್ಸರ್ ಪಟೇಲ್ 42 ರನ್ ಸಿಡಿಸಿದರು. ಡೆಲ್ಲಿ 8 ವಿಕೆಟ್ ಕಳೆದುಕೊಂಡು 143 ರನ್ ಸಿಡಿಸಿತು. ಈ ಮೂಲಕ ಮುಂಬೈ ಇಂಡಿಯನ್ಸ್ 57 ರನ್ ಭರ್ಜರಿ ಗೆಲುವು ದಾಖಲಿಸಿತು. ನವೆಂಬರ್ 10 ರಂದು ನಡೆಯಲಿರು ಫೈನಲ್ ಪಂದ್ಯದ ಟಿಕೆಟ್ ಗಿಟ್ಟಿಸಿಕೊಂಡಿರುವ ಮುಂಬೈಗೆ ಇನ್ನೆರಡು ದಿನ ವಿಶ್ರಾಂತಿ ಸಿಗಲಿದೆ.
ನವೆಂಬರ್ 06ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೋರಾಟ ನಡೆಸಲಿದೆ.