ಐಪಿಎಲ್ 2020: ಫ್ರಾಂಚೈಸಿಗಳ ಮುಂದೆ ಎದುರಾಗಿವೆ ಹಲವು ಸವಾಲು..!
ಹಲವು ಸರ್ಕಸ್‌ಗಳ ಬಳಿಕ ಐಪಿಎಲ್ ಟೂರ್ನಿಗೆ ಡೇಟ್ ಫಿಕ್ಸ್ ಆಗಿದೆ. ಆದರೆ ಫ್ರಾಂಚೈಸಿಗಳ ಮುಂದೆ ಇದೀಗ ಹಲವು ಸವಾಲುಗಳು ಎದುರಾಗಿವೆ. ಏನು ಆ ಸವಾಲುಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ನವದೆಹಲಿ(ಆ.02): ಈ ಬಾರಿ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದ್ದರೂ, ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡಿಲ್ಲ. ಫ್ರಾಂಚೈಸಿಗಳ ಮುಂದೆ ಅನೇಕ ಸವಾಲುಗಳಿದ್ದು, ವಿದೇಶಿ ಆಟಗಾರರನ್ನು ಯುಎಇಗೆ ಕರೆಸಿಕೊಳ್ಳುವುದು ಪ್ರಮುಖ ಸವಾಲಾಗಿ ಪರಿಣಮಿಸಲಿದೆ.
ಅನೇಕ ತಾರಾ ವಿದೇಶಿ ಆಟಗಾರರು ಮೊದಲ ಒಂದೆರಡು ವಾರದ ಪಂದ್ಯಗಳಿಗೆ ಗೈರಾಗುವ ಸಾಧ್ಯತೆ ಇದೆ. ವಿದೇಶಿ ಆಟಗಾರರಿಗೆ ವಿಶೇಷ ವಿಮಾನ ವ್ಯವಸ್ಥೆ ಮಾಡುವುದು ಫ್ರಾಂಚೈಸಿಗಳಿಗೆ ತಲೆನೋವಾಗಿ ಪರಿಣಮಿಸಲಿದೆ. ಸೆ.15ರ ವರೆಗೂ ಆಸ್ಪ್ರೇಲಿಯಾ-ಇಂಗ್ಲೆಂಡ್ ನಡುವೆ ಸರಣಿ ನಡೆಯಲಿದೆ. ಬೆನ್ ಸ್ಟೋಕ್ಸ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಸೇರಿದಂತೆ ಹಲವು ತಾರಾ ಆಟಗಾರರು ಈ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆ.19ರಿಂದ ಐಪಿಎಲ್ ಆರಂಭಗೊಳ್ಳಲಿದ್ದು, ಇಂಗ್ಲೆಂಡ್ ಹಾಗೂ ಆಸೀಸ್ ಆಟಗಾರರು ಯುಎಇನಲ್ಲಿ ಕಡ್ಡಾಯ ಕ್ವಾರಂಟೈನ್ ಸಹ ಪೂರೈಸಬೇಕಿದೆ.
ಖಾಲಿ ಸ್ಟೇಡಿಯಂನಲ್ಲಿ IPL ನಡೆಯುತ್ತಾ..? UAE ನಿಂದ ಮಹತ್ವದ ತೀರ್ಮಾನ
ಇನ್ನು ಸೆ.10ರ ವರೆಗೂ ಕೆರಿಬಿಯನ್ ಪ್ರೀಮಿಯರ್ ಲೀಗ್ ನಡೆಯಲಿದ್ದು, ಈ ಟೂರ್ನಿಯಲ್ಲಿ ಆಡುವ ವಿದೇಶಿ ಆಟಗಾರರನ್ನು ಕರೆಸಿಕೊಳ್ಳುವುದು ಸಹ ಸವಾಲು. ಅದೇ ರೀತಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ದಕ್ಷಿಣ ಆಫ್ರಿಕಾ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುವುದೇ ಅನುಮಾನವೆನಿಸಿದೆ.
ದೀಪಾವಳಿ: ಐಪಿಎಲ್ ಫೈನಲ್ 8ರ ಬದಲು 10ಕ್ಕೆ?
ನವದೆಹಲಿ: 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ಪಂದ್ಯ ನವೆಂಬರ್ 8ರ ಬದಲು 10ಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ದೀಪಾವಳಿ ಹಿನ್ನೆಲೆಯಲ್ಲಿ ಪಂದ್ಯದ ಪ್ರಸಾರ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ಈ ಬದಲಾವಣೆ ಕೇಳಿದೆ ಎನ್ನಲಾಗಿದೆ.
ಆಗಸ್ಟ್ 2ರಂದು ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಷಯ ಚರ್ಚೆಯಾಗುವ ಸಾಧ್ಯತೆಯಿದೆ. ಒಂದೊಮ್ಮೆ ಬದಲಾದ ದಿನಾಂಕದಲ್ಲಿ ಫೈನಲ್ ಪಂದ್ಯ ನಡೆದರೆ, 51 ದಿನಗಳ ಟೂರ್ನಿ 53 ದಿನಕ್ಕೆ ವಿಸ್ತರಣೆಯಾಗಲಿದೆ. ಯುಎಇಯಲ್ಲಿ ನಡೆಸಲು ನಿರ್ಧರಿಸಿರುವ ಐಪಿಎಲ್ ಟೂರ್ನಿ ಸೆ.19ರಿಂದ ಆರಂಭವಾಗಲಿದ್ದು, ಅಂತಿಮ ವೇಳಾಪಟ್ಟಿ ಇನ್ನು ಬಿಡುಗಡೆಯಾಗಿಲ್ಲ.