ಯುಎಇಯಲ್ಲಿ ಐಪಿಎಲ್ ಆಯೋಜನೆಗೆ ಬಿಸಿಸಿಐ ಪತ್ರ
ದುಬೈನಲ್ಲಿ ಐಪಿಎಲ್ ಆಯೋಜಿಸುವ ಬಗ್ಗೆ ಬಿಸಿಸಿಐ ಒಲವು ತೋರಿದ್ದು, ಈ ಕುರಿತಂತೆ ಪತ್ರ ಬರೆದಿರುವುದಾಗಿ ಎಮಿರಾಟ್ಸ್ ಕ್ರಿಕೆಟ್ ಬೋರ್ಡ್ ಖಚಿತ ಪಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದುಬೈ(ಜು.28): 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯನ್ನು ಯುಎಇಯಲ್ಲಿ ಆಯೋಜಿಸುವ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಳುಹಿಸಿರುವ ಪತ್ರ ದೊರಕಿದೆ ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಕಾರ‍್ಯದರ್ಶಿ ಮುಬಾಶಿರ್ ಸೋಮವಾರ ಹೇಳಿದ್ದಾರೆ.
ಸೆಪ್ಟೆಂಬರ್ 19ರಿಂದ ಟೂರ್ನಿ ಆರಂಭವಾಗಲಿದೆ ಎಂದು ಕಳೆದ ವಾರ ದಿನಾಂಕವನ್ನು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಖಚಿತಪಡಿಸಿದ್ದರು. ಐಪಿಎಲ್ ಟೂರ್ನಿಯನ್ನು ಯುಎಇಯಲ್ಲಿ ನಡೆಸುವ ಬಗ್ಗೆ ಭಾರತ ಸರ್ಕಾರದ ಅಂತಿಮ ಅನುಮತಿ ದೊರೆತಿಲ್ಲ. ಇದಕ್ಕಾಗಿಯೇ ಕಾಯುತ್ತಿರುವುದಾಗಿ ಮುಬಾಶಿರ್ ಹೇಳಿದ್ದಾರೆ. ಒಪ್ಪಿಗೆ ಸಿಕ್ಕ ಕೂಡಲೇ ಸುರಕ್ಷಿತ ಹಾಗೂ ಸುಸಜ್ಜಿತವಾಗಿ ಟೂರ್ನಿ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.
IPL 2020 ಆರಂಭದ ದಿನಾಂಕ ಖಚಿತ ಪಡಿಸಿದ ಬ್ರಿಜೇಶ್ ಪಟೇಲ್
ಮಾರ್ಚ್ 29ರಿಂದ ಆರಂಭದಲ್ಲಿ ಆರಂಭವಾಗಬೇಕಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೋನಾ ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು. ಹಲವು ಸರ್ಕಸ್‌ಗಳ ಬಳಿಕ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಮುಂದೂಡಲ್ಪಟ್ಟಿದ್ದರಿಂದ ಐಪಿಎಲ್ ಆಯೋಜನೆಯ ಹಾದಿ ಸುಗಮವಾಯಿತು. ಭಾರತದಲ್ಲೇ ಐಪಿಎಲ್ ಆಯೋಜಿಸಲು ಬಿಸಿಸಿಐ ಪ್ರಯತ್ನಿಸಲಾಯಿತಾದರೂ, ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅನಿವಾರ್ಯವಾಗಿ ಐಪಿಎಲ್ ಟೂರ್ನಿಯನ್ನು ಯುಎಇಗೆ ಮುಂದೂಡಲು ತೀರ್ಮಾನಿಸಲಾಯಿತು.
ತಿಂಗಳಿಗೂ ಮುನ್ನ ಸಿಎಸ್‌ಕೆ ಯುಎಇಗೆ ಪ್ರಯಾಣ
ಚೆನ್ನೈ: 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿ ಯುಎಇಯಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಆದರೆ ಬಿಸಿಸಿಐ ಅಧಿಕೃತ ಮಾಹಿತಿ ನೀಡಿಲ್ಲ. ಈ ನಡುವೆ ಪೂರ್ವಭ್ಯಾಸಕ್ಕಾಗಿ ಎಲ್ಲಾ ತಂಡಗಳು 1 ತಿಂಗಳು ಮುನ್ನವೇ ಯುಎಇಗೆ ಪ್ರಯಾಣ ಬೆಳೆಸಲಿವೆ ಎಂದು ಇತ್ತೀಚೆಗಷ್ಟೇ ಬಿಸಿಸಿಐ ಮೂಲಗಳು ತಿಳಿಸಿದ್ದವು.
ಆದರೆ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ, ಎಲ್ಲಾ ಪ್ರಾಂಚೈಸಿಗಳು ತೆರಳುವುದಕ್ಕೂ ಮುನ್ನವೇ ಯುಎಇಗೆ ಪ್ರಯಾಣಿಸಲಿದೆಯಂತೆ. ಆಗಸ್ಟ್ 2ನೇ ವಾರದಲ್ಲಿ ಎಂ.ಎಸ್. ಧೋನಿ ನೇತೃತ್ವದ ತಂಡ ಯುಎಇಗೆ ತೆರಳಲಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.