IPL 2020 ಆರಂಭದ ದಿನಾಂಕ ಖಚಿತ ಪಡಿಸಿದ ಬ್ರಿಜೇಶ್ ಪಟೇಲ್
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಟೂರ್ನಿಯು ಯಾವಾಗಿಂತ ಆರಂಭವಾಗಲಿದೆ ಎನ್ನುವ ಕುತೂಹಲಕ್ಕೆ ಐಸಿಸಿ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತೆರೆ ಎಳೆದಿದ್ದಾರೆ. ಯಾವಾಗಿಂದ ಐಪಿಎಲ್ ಆರಂಭವಾಗಿ ಮತ್ತೆ ಯಾವಾಗ ಮುಗಿಯುತ್ತೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
- ಅಪ್ರಮೇಯ .ಸಿ
ಬೆಂಗಳೂರು(ಜು.24): ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯುವುದನ್ನು ಐಸಿಸಿ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಖಚಿತ ಪಡಿಸಿದ್ದಾರೆ.
ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆ ಏಷ್ಯಾನೆಟ್ ನ್ಯೂಸೇಬಲ್ ಜತೆ ಮಾತನಾಡಿದ ಬ್ರಿಜೇಶ್ ಪಟೇಲ್, 2020ನೇ ಸಾಲಿನ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ, ನವೆಂಬರ್ 08ರವರೆಗೆ ನಡೆಯಲಿದೆ ಎಂದು ಹೇಳಿದ್ದಾರೆ. ಸರ್ಕಾರದಿಂದ ಅನುಮತಿ ಸಿಕ್ಕಿದೆಯಾ ಎನ್ನುವ ಪ್ರಶ್ನೆಗೆ, ಅದು ಸಿಗಲಿದೆ ಎಂದಿದ್ದಾರೆ. ಇದೇ ವೇಳೆ ಪೂರ್ಣ ಪ್ರಮಾಣದ ಟೂರ್ನಿಯು ಯುಎಇನಲ್ಲಿ ನಡೆಯಲಿದ್ದು, 51 ದಿನಗಳ ಅವಧಿಯಲ್ಲಿ 60 ಪಂದ್ಯಗಳು ನಡೆಯಲಿವೆ ಎಂದು ಬ್ರಿಜೇಶ್ ಖಚಿತಪಡಿಸಿದ್ದಾರೆ.
ದುಬೈ, ಅಬುದಾಬಿ ಹಾಗೂ ಶಾರ್ಜಾದಲ್ಲಿ ಐಪಿಎಲ್ ಪಂದ್ಯಾವಳಿಗಳು ನಡೆಯುವ ಸಾಧ್ಯತೆ ಹೆಚ್ಚಿದೆ. ಈ ವರ್ಷದ ಐಪಿಎಲ್ ಆಯೋಜಿಸುವ ಕುರಿತಂತೆ ಎಮಿರೇಟ್ಸ್ ಕ್ರಿಕೆಟ್ ಸಂಸ್ಥೆ ಈವರೆಗೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ಬಿಸಿಸಿಐ ಅಧಿಕೃತ ಆಹ್ವಾನವನ್ನು ಎದುರು ನೋಡುತ್ತಿರುವುದಾಗಿ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಕಳೆದೆರಡು ದಿನಗಳ ಹಿಂದಷ್ಟೇ ಹೇಳಿತ್ತು.
IPL ಆರಂಭಕ್ಕೆ ಡೇಟ್ ಫೈನಲ್: ಹೊಡಿಬಡಿಯಾಟಕ್ಕೆ ದಿನಗಣನೆ ಆರಂಭ..!
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 29ರಿಂದ ಆರಂಭವಾಗಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು. ಆದಾಗಿಯೂ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿ ಮುಂದೂಡಲ್ಪಟ್ಟಿದ್ದರಿಂದ ಐಪಿಎಲ್ ಆಯೋಜನೆಯ ಹಾದಿ ಸುಗಮವಾಯಿತು.
ಐಪಿಎಲ್ ಸಂಪೂರ್ಣ ವೇಳಾಪಟ್ಟಿ, ಆಟಗಾರರು ಯಾವಾಗ ಯುಎಇಗೆ ತೆರಳಲಿದ್ದಾರೆ ಎನ್ನುವುದರ ಸಂಪೂರ್ಣ ಮಾಹಿತಿ ಮುಂದಿನವಾರ ನಡೆಯಲಿರುವ ಐಪಿಎಲ್ ಗರ್ವನಿಂಗ್ ಸಭೆಯ ಬಳಿಕ ಅಂತಿಮವಾಗಲಿದೆ.
ಈ ಲೇಖನವನ್ನು ಇಂಗ್ಲೀಷ್‌ನಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.