ಈ ವರ್ಷ ಖಾಲಿ ಮೈದಾನದಲ್ಲಾದರೂ ಐಪಿಎಲ್ ನಡೆಸಿಯೇ ಸಿದ್ಧ: ಗಂಗೂಲಿ
2020ರಲ್ಲೇ ಐಪಿಎಲ್ ಆಯೋಜನೆಯ ಕುರಿತಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಕಾರಾತ್ಮಕ ಸುದ್ದಿಯೊಂದನ್ನು ನೀಡಿದ್ದು, ಖಾಲಿ ಮೈದಾನದಲ್ಲಿಯಾದರೂ ಐಪಿಎಲ್ ಆಯೋಜಿಸಲು ರೆಡಿ ಇರುವುದಾಗಿ ತಿಳಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜೂ.11): ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇದೇ ವರ್ಷ(2020)ದಲ್ಲೇ ಐಪಿಎಲ್ ಆಯೋಜಿಸಲು ಎಲ್ಲಾ ಸಾಧ್ಯತೆಗಳ ಬಗ್ಗೆ ಅವಲೋಕನ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಕುರಿತಂತೆ ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ದಾದಾ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಖಾಲಿ ಮೈದಾನದಲ್ಲಿ ಬೇಕಾದರೂ ಐಪಿಎಲ್ ಆಯೋಜಿಸಲು ಬಿಸಿಸಿಐ ರೆಡಿಯಿದೆ ಎಂದು ಗಂಗೂಲಿ ತಿಳಿಸಿದ್ದಾರೆ ಎಂದು 'ದ ಟೈಮ್ಸ್ ಆಫ್ ಇಂಡಿಯಾ' ಬುಧವಾರ(ಜೂ.10)ರಂದು ವರದಿ ಮಾಡಿತ್ತು. ಈ ವರ್ಷವೇ ಐಪಿಎಲ್ ಆಯೋಜನೆಯ ಸಾಧ್ಯತೆಯ ಬಗ್ಗೆ ಎಲ್ಲಾ ಆಯಾಮಗಳನ್ನು ಆಲೋಚಿಸುತ್ತಿದೆ. ಖಾಲಿ ಮೈದಾನದಲ್ಲಿ ಆಯೋಜಿಸುವ ಬಗ್ಗೆಯೂ ಯೋಜನೆಯಿದೆ. ಅಭಿಮಾನಿಗಳು, ಫ್ರಾಂಚೈಸಿ, ಆಟಗಾರರು, ಪ್ರಸಾರದ ಹಕ್ಕು ಪಡೆದವರು, ಪ್ರಾಯೋಜಕರು ಈ ವರ್ಷ ಐಪಿಎಲ್ ನಡೆಸುವುದನ್ನು ಎದುರು ನೋಡುತ್ತಿದ್ದಾರೆ ಎಂದು ಗಂಗೂಲಿ ಹೇಳಿರುವುದಾಗಿ ವರದಿ ಮಾಡಿದೆ.
ಈ ವರ್ಷ ಐಪಿಎಲ್ ಆಯೋಜನೆಯ ಕುರಿತಂತೆ ನಾವೆಲ್ಲಾ ಆಶಾವಾದವನ್ನು ಹೊಂದಿದ್ದೇವೆ. ಪ್ರೇಕ್ಷಕರಿಲ್ಲದೇ ಖಾಲಿ ಮೈದಾನದಲ್ಲಿ ಬೇಕಾದರೂ ಐಪಿಎಲ್ ನಡೆಸುವ ಸಾಧ್ಯತೆಗಳನ್ನು ಆಲೋಚಿಸುತ್ತಿದ್ದೇವೆ. ಬಿಸಿಸಿಐ ಸದ್ಯದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ದಾದಾ ತಿಳಿಸಿದ್ದಾರೆ.
ICC ಮಹತ್ವದ ಸಭೆ; ಮಂದಿನ ತಿಂಗಳು T20 ವಿಶ್ವಕಪ್, IPL ಭವಿಷ್ಯ ನಿರ್ಧಾರ!
ಬಹುನಿರೀಕ್ಷಿತ ಐಪಿಎಲ್ ಟೂರ್ನಿಯು ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮಾರ್ಚ್ 29ರಿಂದ ಆರಂಭವಾಗಬೇಕಿತ್ತು. ಆದರೆ ಕೊರೋನಾ ವೈರಸ್ ವಕ್ಕರಿಸಿಕೊಂಡಿದ್ದರಿಂದ ಟೂರ್ನಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಇನ್ನು ಅಕ್ಟೋಬರ್-ನವೆಂಬರ್‌ನಲ್ಲಿ ಟಿ20 ವಿಶ್ವಕಪ್ ಜರುಗಲಿದ್ದು, ಒಂದು ವೇಳೆ ಚುಟುಕು ವಿಶ್ವಕಪ್ ಟೂರ್ನಿ ಮುಂದೂಡಿದರೆ ಆ ವೇಳೆ ಐಪಿಎಲ್ ಭಾರತದಲ್ಲಿ ಜರುಗುವ ಸಾಧ್ಯತೆಯಿದೆ.