ಮುಂಬೈ(ನ.14): 14ನೇ ಆವೃತ್ತಿ ಐಪಿಎಲ್‌ ಟೂರ್ನಿಯಲ್ಲಿ ತಂಡವೊಂದಕ್ಕೆ ಬ್ಯಾಟಿಂಗ್‌ ಕೋಚ್‌ ಆಗಿ ಕಾರ‍್ಯನಿರ್ವಹಿಸುವ ಇಚ್ಛೆ ಇರುವುದಾಗಿ ಟೀಂ ಇಂಡಿಯಾ ಮಾಜಿ ಆಟಗಾರ ವಿನೋದ್‌ ಕಾಂಬ್ಳಿ ಹೇಳಿದ್ದಾರೆ. 

ಯಾವುದಾದರೂ ತಂಡವೊಂದಕ್ಕೆ ಬ್ಯಾಟಿಂಗ್‌ ಸಲಹೆಗಾರನಾಗಲು ನಾನು ಲಭ್ಯವಿದ್ದೇನೆ. ಗಾಯಗೊಂಡಿದ್ದ ಕಾರಣದಿಂದ 2008ರ ಮೊದಲ ಆವೃತ್ತಿಯ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಮುಂಬೈ ರಣಜಿ ತಂಡದಿಂದ ಹೊರಬಿದ್ದು, ನಂತರ ನಿವೃತ್ತಿಯಾದೆ. ನನ್ನ ಎಡಗಾಲಿಗೆ ಕಬ್ಬಿಣದ ರಾಡ್‌ನ್ನು ಹಾಕಲಾಗಿದೆ. ಐಪಿಎಲ್‌ನಲ್ಲಿ ತಂಡವೊಂದಕ್ಕೆ ಬ್ಯಾಟಿಂಗ್‌ ಕೋಚ್‌ ಆಗುವುದು ನನ್ನ ಕನಸು ಎಂದು ಕಾಂಬ್ಳಿ ಹೇಳಿದ್ದಾರೆ. 

13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ನಾನು ಅತಿ ಹತ್ತಿರದಿಂದ ಗಮನಿಸಿದ್ದೇನೆ. ಯುಎಇನಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಎಲ್ಲಾ ಲೆಗ್‌ಸ್ಪಿನ್ನರ್‌ಗಳು ಬಹುತೇಕ ಗೂಗ್ಲಿ ಎಸೆತಗಳನ್ನು ಹಾಕಿದ್ದಾರೆ. ಸಾಮಾನ್ಯವಾಗಿ ಗೂಗ್ಲಿ ಎಸೆತಗಳನ್ನು ಎದುರಿಸುವುದು ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿ ಪರಿಣಮಿಸಲಿದೆ. ಈ ವಿಚಾರದಲ್ಲಿ ನಾನು ಬ್ಯಾಟ್ಸ್‌ಮನ್‌ಗಳಿಗೆ ನೆರವಾಗಲು ಸದಾಸಿದ್ದನಿದ್ದೇನೆ ಎಂದು ವಿನೋದ್ ಕಾಂಬ್ಳಿ ಹೇಳಿದ್ದಾರೆ.

ಐಪಿಎಲ್ ‌2021: ತಂಡದಲ್ಲಿ 5 ವಿದೇಶಿ ಆಟಗಾರನ್ನು ಸೇರಿಸಲು ಫ್ರಾಂಚೈಸಿ ಒತ್ತಾಯ

48 ವರ್ಷದ ವಿನೋದ್‌ ಕಾಂಬ್ಳಿ 1991ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಕಾಂಬ್ಳಿ ಭಾರತ ಪರ 17 ಟೆಸ್ಟ್‌, 104 ಏಕದಿನ ಪಂದ್ಯವನ್ನಾಡಿದ್ದಾರೆ. ಸದ್ಯ ಕಾಂಬ್ಳಿ ಸಚಿನ್‌ ಅಕಾಡೆಮಿಯಲ್ಲಿ ಬ್ಯಾಟಿಂಗ್‌ ಸಲಹೆಗಾರರಾಗಿ ಕಾರ‍್ಯನಿರ್ವಹಿಸುತ್ತಿದ್ದಾರೆ.