ಒಂದು ವೇಳೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಹರಾಜು ನಡೆದರೆ ಧೋನಿಯನ್ನು ಸಿಎಸ್‌ಕೆ ಕೈ ಬಿಡುವುದೇ ಒಳ್ಳೆಯದು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ನ.17): 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಒಂದು ವೇಳೆ ಮೆಗಾ ಹರಾಜು ನಡೆದಿದ್ದೇ ಆದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳುವ ಬದಲು ಕೈಬಿಡುವುದೇ ಒಳಿತು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.
ಒಂದು ವೇಳೆ ಧೋನಿಯನ್ನು ಚೆನ್ನೈ ತನ್ನಲ್ಲೇ ಉಳಿಸಿಕೊಂಡರೆ 15 ಕೋಟಿ ರುಪಾಯಿ ಕಳೆದುಕೊಂಡಂತೆ, ಅದರ ಬದಲು ಬೇರೆ ರೂಪದಲ್ಲಿ ವಿನಿಯೋಗಿಸಬಹುದಾಗಿದೆ. ಧೋನಿಯನ್ನು ರೀಟೈನ್ ಮಾಡಿಕೊಳ್ಳುವ ಬದಲು ಹರಾಜಿನಲ್ಲಿ ಆರ್‌ಟಿಎಂ ಕಾರ್ಡ್ ಬಳಸಿ ಚೆನ್ನೈ ಧೋನಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಬಹುದು ಎಂದು ಚೋಪ್ರಾ ಸಲಹೆ ನೀಡಿದ್ದಾರೆ. ಹೀಗಾದ ಪಕ್ಷದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಖಾತೆಯಲ್ಲಿ ಮತ್ತಷ್ಟು ಹಣ ಉಳಿಯಲಿದ್ದು, ಮತ್ತಷ್ಟು ಬಲಿಷ್ಠ ತಂಡವನ್ನು ಕಟ್ಟಬಹುದು ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಈತ ಮುಂದೊಂದು ದಿನ ಟೀಂ ಇಂಡಿಯಾ ನಾಯಕನಾಗಬಲ್ಲ: ಅಲೆಕ್ಸ್ ಕ್ಯಾರಿ
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ 10 ಆವೃತ್ತಿಗಳಲ್ಲಿ ಪ್ಲೇ ಆಫ್ ಪ್ರವೇಶಿಸಿ ದಾಖಲೆ ಬರೆದಿತ್ತು. ಅದರೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡ 3 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದು, ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತ್ತು.
