ಈ ವರ್ಷ IPL ಆಯೋಜನೆ ಬೇಡವೆಂದ ವಿದೇಶಾಂಗ ಸಚಿವಾಲಯ..!
ಕೊರೋನಾ ಭೀತಿಯ ಬೆನ್ನಲ್ಲೇ 13ನೇ ಆವೃತ್ತಿಯ ಐಪಿಎಲ್ ಆಯೋಜನೆ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ. ಇದೀಗ ವಿದೇಶಾಂಗ ಸಚಿವಾಲಯ ಐಪಿಎಲ್ ಅಭಿಮಾನಿಗಳ ಆಸೆಗೆ ತಣ್ಣೀರೆರಚುವ ಸಲಹೆ ನೀಡಿದೆ. ಏನದು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್.
ನವದೆಹಲಿ(ಮಾ.12): ಜಗತ್ತಿನಾದ್ಯಂತ ತಲ್ಲಣ ಮೂಡಿಸಿರುವ ಕೊರೋನಾ ವೈರಸ್ ಇದೀಗ ಐಪಿಎಲ್ ಮೇಲೂ ತನ್ನ ಕೆಂಗಣ್ಣು ಬೀರಿದೆ. ಇದರ ಬೆನ್ನಲ್ಲೇ 13ನೇ ಆವೃತ್ತಿಯ ಐಪಿಎಲ್ ಆಯೋಜಿಸದಿರುವುದೇ ಒಳಿತೆಂದು ಬಿಸಿಸಿಐಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲಹೆ ನೀಡಿದೆ.
ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅಧಿಕಾರಿಗಳು, ಐಪಿಎಲ್ ಮುಂದೂಡುವುದು ಇಲ್ಲವೇ ರದ್ದು ಮಾಡುವುದು ಬಿಸಿಸಿಐ ವಿವೇಚನೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.
ಕ್ರಿಕೆಟ್‌ಗೆ ತಟ್ಟಿತೂ ಕೊರೋನಾ ವೈರಸ್; ಪಂದ್ಯ ಮುಂದೂಡಿಕೆ!
ಶನಿವಾರ(ಮಾರ್ಚ್ 14) ಐಪಿಎಲ್ ಗವರ್ನಿಂಗ್ ಕಮಿಟಿ ಸಭೆ ಸೇರಲಿದ್ದು, 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಯೋಜನೆಯ ಕುರಿತಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಈ ಮೊದಲಿನ ವೇಳಾಪಟ್ಟಿಯಂತೆ ಪಂದ್ಯ ನಡೆದರೆ, ಮುಂಬೈನ ವಾಂಖೆಡೆ ಮೈದಾನದಲ್ಲಿ ಮಾರ್ಚ್ 29ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಕೊರೋನಾ ವೈರಸ್ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಹೆಚ್ಚಾಗಿ ಗುಂಪು ಸೇರಬೇಡಿ. ಈ ವೈರಸ್ ಬಗ್ಗೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ, ಆದರೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಕೇಂದ್ರ ಸರ್ಕಾರದ ಯಾವೊಬ್ಬ ಸಚಿವರು ಮುಂದಿನ ಕೆಲದಿನಗಳ ಮಟ್ಟಿಗೆ ವಿದೇಶಿ ಪ್ರವಾಸ ಕೈಗೊಳ್ಳುವುದಿಲ್ಲ. ಅನಗತ್ಯವಾಗಿ ವಿದೇಶಿ ಪ್ರವಾಸ ಮಾಡಬೇಡಿ ಎಂದು ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.