ಐಪಿಎಲ್ 2025 ಫೈನಲ್ ಹಂತಕ್ಕೆ ಬಂದು ನಿಂತಿದೆ. ಇಂದು ಆರ್ ಸಿಬಿ ಹಾಗೂ ಪಂಜಾಬ್ ಮಧ್ಯೆ ಕಪ್ ಗಾಗಿ ಹಣಾಹಣಿ ನಡೆಯಲಿದೆ. ಒಂದ್ವೇಳೆ ಇಂದು ಪಂದ್ಯ ರದ್ದಾದ್ರೆ ಆರ್ ಸಿಬಿ ಕನಸು ಮತ್ತೆ ಭಗ್ನವಾಗುವ ಸಾಧ್ಯತೆ ಇದೆ.
ಈ ಬಾರಿ ಕಪ್ ನಮ್ದೆ (Cup Namde). ಈ ಮಾತು ಈ ಬಾರಿ ಸತ್ಯವಾಗುವ ಸಾಧ್ಯತೆ ದಟ್ಟವಾಗಿದೆ. ಆರ್ ಸಿಬಿ (R CB) ಅಭಿಮಾನಿಗಳ ಎದೆ ಬಡಿತ ಜೋರಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯಕ್ಕೆ ಕ್ಷಣ ಗಣನೆ ಶುರುವಾಗಿದೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ಗೇರಿರೋದ್ರಿಂದ ಪಂದ್ಯ ಮತ್ತಷ್ಟು ರೋಚಕತೆ ಪಡೆಯಲು ಕಾರಣವಾಗಿದೆ. ಆರ್ ಸಿಬಿ ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಪೂಜೆ, ಪ್ರಾರ್ಥನೆಗಳು ಜೋರಾಗಿವೆ. ಎಲ್ಲಿ ನೋಡಿದ್ರೂ ಆರ್ ಸಿಬಿ ಕೂಗು ಕೇಳಿ ಬರ್ತಿದೆ.
18 ವರ್ಷಗಳ ನಂತ್ರ ಮೊದಲ ಬಾರಿ ಕಪ್ : ಆರ್ ಸಿಬಿ, ಪಂಜಾಬ್ ಕಿಂಗ್ಸ್ (Punjab Kings) ನಡುವೆ ಫೈನಲ್ ಹಣಾಹಣಿ ನಡೆಯಲಿದೆ. ಎರಡೂ ತಂಡಕ್ಕೆ ಇದು ವಿಶೇಷ, ಮಹತ್ವದ ಪಂದ್ಯ. ಎರಡೂ ತಂಡಗಳು ಈವರೆಗೆ ಕಪ್ ಗೆದ್ದಿಲ್ಲ. ಈ ಪಂದ್ಯದಲ್ಲಿ ಯಾರು ಗೆದ್ರೂ 18 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಕಪ್ ಎತ್ತಿ ಹಿಡಿಯಲಿದ್ದಾರೆ.
ಭಗ್ನವಾಗುತ್ತಾ ಕನಸು? : ಯಾರಿಗೆ ಕಪ್ ಎನ್ನುವ ದೊಡ್ಡ ಪ್ರಶ್ನೆಗೆ ಶೀಘ್ರವೇ ಉತ್ತರ ಸಿಗಲಿದೆ. ಅಪ್ಪಿತಪ್ಪಿ ವರುಣದೇವ ಮುನಿಸಿಕೊಂಡ್ರೆ, ಇಷ್ಟು ವರ್ಷ ಕಾದಿರುವ ಆರ್ ಸಿಬಿ ಅಭಿಮಾನಿಗಳ ಕನಸು ಮತ್ತೆ ಭಗ್ನವಾಗುವ ಸಾಧ್ಯತೆ ಇದೆ. ಇವತ್ತಿನ ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಲ್ಲಯೇ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆದಿತ್ತು. ಈ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಇದ್ರಿಂದಾಗಿ ಮ್ಯಾಚ್, ಲೇಟ್ ಆಗಿ ಪ್ರಾರಂಭವಾಗಿತ್ತು. ಮಳೆಯಿಂದಾಗಿ ಟಾಸ್ ಕೂಡ ವಿಳಂಬವಾಗಿತ್ತು. ಒಂದ್ವೇಳೆ ಇಂದೂ ಮಳೆ ಬಂದ್ರೆ ಲೆಕ್ಕಾಚಾರ ತಲೆಕೆಳಗಾಗಲಿದೆ. ಇಂದು ಮಳೆಯಾಗುವ ಸಾಧ್ಯತೆಗಳು ಶೇಕಡಾ 50 ಕ್ಕಿಂತ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಪಂದ್ಯ ರದ್ದಾದರೆ ಏನಾಗುತ್ತೆ? : ಒಂದು ವೇಳೆ ಇಂದು ಮಳೆಯಿಂದ ಮ್ಯಾಚ್ ರದ್ದಾದ್ರೆ ಚಿಂತಿಸುವ ಅಗತ್ಯವಿಲ್ಲ. ಫೈನಲ್ ಗಾಗಿ ಐಪಿಎಲ್ ಇನ್ನೊಂದು ದಿನಾಂಕವನ್ನು ನಿಗದಿಪಡಿಸುತ್ತದೆ. ರಿಸರ್ವ್ ಡೇವರೆಗೆ ಫ್ಯಾನ್ಸ್ ಕಾಯ್ಬೇಕು. ಮಳೆ ಅಥವಾ ಬೇರೆ ಯಾವುದೋ ಕಾರಣಕ್ಕೆ ಆ ದಿನ ಕೂಡ ಪಂದ್ಯ ರದ್ದಾದರೆ ಆರ್ ಸಿಬಿಗೆ ದೊಡ್ಡ ನಷ್ಟವಾಗಲಿದೆ.
ಐಪಿಎಲ್ ನಿಯಮ ಏನು? : ಐಪಿಎಲ್ ಫೈನಲ್ ಪಂದ್ಯ ಯಾವುದೇ ಕಾರಣಕ್ಕೆ ರದ್ದಾದಲ್ಲಿ ಐಪಿಎಲ್ ನಿಯಮದ ಪ್ರಕಾರ, ಲೀಗ್ ಹಂತದಲ್ಲಿ ತಂಡ ಪಡೆದ ಪಾಯಿಂಟ್ ಗಳನ್ನು ಗಮನಿಸಲಾಗುತ್ತದೆ. ಲೀಗ್ ಹಂತದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ಟ್ರೋಫಿ ಗೆಲ್ಲುತ್ತದೆ. ಒಂದ್ವೇಳೆ ಇಂದು ಮತ್ತು ರಿಸರ್ವ್ ಡೇ ಎರಡೂ ದಿನ ಪಂದ್ಯ ರದ್ದಾದ್ರೆ ಪಂಜಾಬ್ ಕಿಂಗ್ಸ್ ಚಾಂಪಿಯನ್ ಆಗಿ ಕಪ್ ಎತ್ತಲಿದೆ. ಆರ್ಸಿಬಿಗೆ ಕಪ್ ಮತ್ತೆ ದೂರವಾಗಲಿದೆ. 18 ವರ್ಷಗಳ ತಪಸ್ಸು ಭಗ್ನವಾಗಲಿದೆ.
2023 ರಲ್ಲಿ ರಿಸರ್ವ್ ಡೇ ದಿನ ನಡೆದಿತ್ತು ಪಂದ್ಯ : 2023 ರಲ್ಲಿ ಅಹಮದಾಬಾದ್ ನಲ್ಲಿ ಐಪಿಎಲ್ ಫೈನಲ್ ಪಂದ್ಯ ನಡೆಯಬೇಕಿತ್ತು. ಮಳೆಯಿಂದಾಗಿ ಫೈನಲ್ ಪಂದ್ಯವನ್ನು ಮುಂದೂಡಲಾಗಿತ್ತು. ಈ ಪಂದ್ಯಕ್ಕೂ ರಿಸರ್ವ್ ಡೇ ನಿಗದಿಪಡಿಸಲಾಗಿತ್ತು. ಮರುದಿನ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಐದು ವಿಕೆಟ್ಗಳಿಂದ ಸೋಲಿಸಿ ಐದನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
