ಮುಂಬೈ(ಮಾ.13): ಕೊರೋನಾ ವೈರಸ್‌ನಿಂದ ಮಿಲಿಯನ್ ಡಾಲರ್ ಟೂರ್ನಿ ಎಂದೇ ಹೆಸರುವಾಸಿಯಾಗಿರುವ ಐಪಿಎಲ್ ಟೂರ್ನಿಗೆ ಅತೀ ದೊಡ್ಡ ಹೊಡೆತ ಬಿದ್ದಿದೆ.  ಕಳೆದ 12 ಆವೃತ್ತಿ ಐಪಿಎಲ್ಟೂ ರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಿಸಿಸಿಐಗೆ 13ನೇ ಆವೃತ್ತಿ ಸವಾಲಾಗಿ ಪರಿಣಮಿಸಿದೆ. ಕೊರೋನಾ ವೈರಸ್‌ನಿಂದ 13ನೇ ಆವೃತ್ತಿ ಐಪಿಎಲ್ ಟೂರ್ನಿಯನ್ನು ಎಪ್ರಿಲ್ 15ರ ವರೆಗೆ ರದ್ದು ಮಾಡಲಾಗಿದೆ. 

CSK ಅಭಿಮಾನಿಗಳನ್ನು ಕೆರಳಿಸಿದ ಐಪಿಎಲ್ ಪ್ರೋಮೋ..!

ಮುಂಬೈನಲ್ಲಿ ನಡೆದ ಬಿಸಿಸಿಐ ತುರ್ತು ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮುನ್ನಚ್ಚೆರಿಕಾ ಕ್ರಮವಾಗಿ ಐಪಿಎಲ್ ಟೂರ್ನಿಯನ್ನು ಎಪ್ರಿಲ್ 15ರ ವರೆಗೆ ರದ್ದು ಮಾಡಲಾಗಿದೆ. ಅಭಿಮಾನಿಗಳು, ಆಟಗಾರರು, ಫ್ರಾಂಚೈಸಿ ಸೇರಿದಂತೆ ಎಲ್ಲರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಭಾರತ ಸರ್ಕಾರ,   ಕೇಂದ್ರ ಆರೋಗ್ಯ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ ಜೊತೆ ಬಿಸಿಸಿಐ ನಿರಂತರ ಸಂಪರ್ಕದಲ್ಲಿದೆ. ಕೊರೋನಾ ವೈರಸ್ ಹತೋಟಿಗೆ ಬಂದ ಬಳಿಕ ಐಪಿಎಲ್ ಟೂರ್ನಿ ಆಯೋಜನೆ ಕುರಿತು ಪ್ರಕಟಣೆ ಹೊರಡಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ಹೇಳಿದ್ದಾರೆ.ಮಾರ್ಚ್ 29 ರಿಂದ ಮೇ.24ರ ವರೆಗೆ ಐಪಿಎಲ್ ಟೂರ್ನಿ ಆಯೋಜಿಸಲಾಗಿತ್ತು.

ಕೊರೋನಾ ವೈರಸ್ ಭಾರತದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಮುಂಜಾಗ್ರತ ಕ್ರಮವಾಗಿ ದೆಹಲಿಯಲ್ಲಿ ಆಯೋಜಿಸಿದ್ದ ವಿಶ್ವಕಪ್ ಶೂಟಿಂಗ್ ಮುಂದೂಡಲಾಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ನಿಗದಿತ ವೇಳಾಪಟ್ಟಿಯಂತೆ ಟೂರ್ನಿ ನಡೆಸುವುದಾಗಿ ಸ್ಪಷ್ಟಪಡಿಸಿದ್ದರು. ಆದರೆ ಬಿಎಸ್ ಯಡಿಯೂರಪ್ಪ ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಪಂದ್ಯ ಆಯೋಜನೆ ಹಾಗೂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ದೆಹಲಿ ಐಪಿಎಲ್ ಪಂದ್ಯಗಳನ್ನು ಆಯೋಜನೆಗೆ ನಿರಾಕರಿಸಿತ್ತು. 

ಕಳೆದ 12 ಆವೃತ್ತಿಗಳಲ್ಲಿ 2 ಬಾರಿ ಐಪಿಎಲ್ ಟೂರ್ನಿ ಲೋಕಸಭಾ ಚುನಾವಣೆ ಕಾರಣಗಳಿಂದ ವಿದೇಶಗಳಿಗೆ ಸ್ಥಳಾಂತರಗೊಂಡಿತ್ತು. 2009ರಲ್ಲಿ ಸೌತ್ ಆಫ್ರಿಕಾಗೆ ಶಿಫ್ಟ್ ಆಗಿದ್ದರೆ, 2014ರಲ್ಲಿ ಆರಂಭಿಕ ಪಂದ್ಯಗಳು ದುಬೈಗೆ ಸ್ಥಳಾಂತರವಾಗಿತ್ತು. ಇನ್ನು 2016, 2017 ರಲ್ಲಿ ಬರ ಪರಿಸ್ಥಿತಿಯಿಂದ ಐಪಿಎಲ್ ರದ್ದು ಮಾಡಲು ಒತ್ತಡ ಕೇಳಿ ಬಂದಿತ್ತು. ಆದರೆ 12 ಆವೃತ್ತಿಯೂ ಯಶಸ್ವಿಯಾಗಿ ನಡೆದಿತ್ತು. ಇದೀಗ ಕೊರೋನಾ ವೈರಸ್‌ನಿಂದ ಟೂರ್ನಿ ಎಪ್ರಿಲ್ 15ರ ವರೆಗೆ ರದ್ದಾಗಿದೆ. 

"

"

ಮಾರ್ಚ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ