ಬೆಂಗಳೂರು(ಆ.10): ವಿರಾಟ್ ಕೊಹ್ಲಿ ಆಡಲು ಇಳಿಯುತ್ತಾರೆ ಎಂದರೆ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿರುತ್ತವೆ. ನಿರೀಕ್ಷೆಗಳು ಅತಿಯಾದಾಗ ಅದು ಆಟಗಾರನ ಮೇಲೆ ಒತ್ತಡವಾಗಿ ಪರಿಣಮಿಸುತ್ತದೆ. ನಾಯಕನಾಗಿ ಟೀಂ ಇಂಡಿಯಾ ಪರವಾಗಿ ಆಡುವಷ್ಟೇ ಒತ್ತಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವಾಗಲೂ ಇರುತ್ತದೆ. ಅಂಡರ್ 19 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಕೊಹ್ಲಿ 2008ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.

ನಿರೀಕ್ಷೆ ಹಾಗೂ ಒತ್ತಡದ ಕುರಿತಂತೆ ಮಾತನಾಡಿದ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಯಕ ಕೊಹ್ಲಿಯ ಒತ್ತಡವನ್ನು ಕಮ್ಮಿ ಮಾಡುವ ಕೆಲಸ ಮಾಡಬೇಕಿದೆ ಎಂದಿದ್ದಾರೆ. ನಾಯಕ ಕೊಹ್ಲಿ ಕಳೆದ ಕೆಲವು ವರ್ಷಗಳಿಂದ ತಂಡದ ಪರ ಗರಿಷ್ಠ ರನ್‌ ಸ್ಕೋರರ್‌ ಆಗಿ ಹೊರಹೊಮ್ಮಿದ್ದರೂ ಸಹಾ ತಂಡ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. 

ಕೊಹ್ಲಿಯನ್ನು ತಮ್ಮ ಪಾಡಿಗೆ ತಾವು ಕ್ರಿಕೆಟ್ ಆಡಲು ಬಿಡಬೇಕು. ನಾಯಕನಾಗಿ ಹಾಗೆಯೇ ಆಟಗಾರನಾಗಿ ಅವರ ಮೇಲೆ ಯಾವುದೇ ಒತ್ತಡ ಬೀಳದಂತೆ ನೋಡಿಕೊಳ್ಳಬೇಕು. ಆಗ ಮಾತ್ರ ತಂಡ ಕಪ್ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಆಸೀಸ್ ಮಾಜಿ ವೇಗಿ ಅಭಿಪ್ರಾಯಪಟ್ಟಿದ್ದಾರೆ.

IPL 2020: ಈ ಸಲ ಪಕ್ಕಾ RCB ಕಪ್ ಗೆಲ್ಲುತ್ತೆ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಇದುವರೆಗೂ ಐಪಿಎಲ್‌ನಲ್ಲಿ 177 ಪಂದ್ಯಗಳನ್ನಾಡಿ 5412 ರನ್ ಬಾರಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 2016ರಲ್ಲಿ ಕೊಹ್ಲಿ ಒಂದೇ ಆವೃತ್ತಿಯಲ್ಲಿ 4 ಶತಕ ಸಹಿತ 973 ರನ್ ಬಾರಿಸಿದ್ದರು. 2013ರಿಂದ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದು ಒಮ್ಮೆಯೂ ತಂಡ ಕಪ್ ಗೆಲ್ಲಲು ಸಾಧ್ಯವಾಗಿಲ್ಲ.

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ. ಕೊರೋನಾ ಭೀತಿಯಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿ ಯುಎಇನಲ್ಲಿ ನಡೆಯಲಿದೆ.