ದುಬೈ(ಅ.01): 13ನೇ ಆವೃತ್ತಿ ಐಪಿಎಲ್ ಟೂರ್ನಿಯನ್ನು ಯಶಸ್ವಿಗೊಳಿಸಲು ಬಿಸಿಸಿಐ ಅವಿರತ ಪ್ರಯತ್ನಿಸುತ್ತಿದೆ. ಕ್ರಿಕೆಟಿಗರನ್ನು ಕೊರೋನಾದಿಂದ ದೂರವಿಡುವುದರ ಜೊತೆಗೆ ಬುಕ್ಕಿಗಳು ಐಪಿಎಲ್ ಟೂರ್ನಿ ಹತ್ತಿರ ಸುಳಿಯದಂತೆ ನೋಡಿಕೊಳ್ಳುವುದು ಮತ್ತೊಂದು ಸವಾಲು. ಇದೀಗ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ(ACU) ಬುಕ್ಕಿಗಳ ಕುರಿತು ಮಹತ್ವದ ಸುಳಿವು ನೀಡಿದೆ. 

ಅಭ್ಯಾಸ ಬಲದಿಂದ ಎಡವಟ್ಟು ಮಾಡಿದ ಉತ್ತಪ್ಪ, ಸಂಕಷ್ಟದಲ್ಲಿ ಕನ್ನಡಿಗ!..

ಐಪಿಎಲ್ 2020 ಟೂರ್ನಿಗಾಗಿ ಬುಕ್ಕಿಗಳು ದುಬೈನಲ್ಲಿ ಬೀಡುಬಿಟ್ಟಿದ್ದಾರೆ. ಆದರೆ ಐಪಿಎಲ್ ಟೂರ್ನಿ ಹತ್ತಿರ ಸುಳಿಯಲು ಸಾಧ್ಯವಾಗಿಲ್ಲ ಎಂದು ACU ಮುಖ್ಯಸ್ಥ ಅಜಿತ್ ಸಿಂಗ್ ಹೇಳಿದ್ದಾರೆ. 13ನೇ ಆವೃತ್ತಿ ಟೂರ್ನಿಗೆ  ಉಭಯ ತಂಡದ ಆಟಗಾರರು, ಸಹಾಯಕ ಸಿಬ್ಬಂದಿ ಸೇರಿದಂತೆ ಕೆಲವೇ ಕೆಲವು ಮಂದಿ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶವಿದೆ. ಇತ್ತ ಕ್ರಿಕೆಟಿಗರು ಕೂಡ ಬಯೋಬಬಲ್ ನಿಯಂತ್ರಣದಲ್ಲಿದ್ದಾರೆ. ಜೊತೆಗೆ ಭ್ರಷ್ಟಾಚಾರ ನಿಗ್ರಹ ದಳ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಇದರಿಂದ ಬುಕ್ಕಿಗಳ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿದೆ ಎಂದು ಅಜಿತ್ ಸಿಂಗ್ ಹೇಳಿದರು.

ಟೂರ್ನಿ ಆರಂಭಕ್ಕೂ ಮುನ್ನ ACU 8 ತಂಡದ ಆಟಗಾರರ ಜೊತೆ ವಿಡೀಯೋ ಕಾನ್ಫೆರೆನ್ಸ್ ಮೂಲಕ ಮಹತ್ವದ ಮಾಹಿತಿ ಹಂಚಿಕೊಂಡಿತ್ತು. ಆಟಾಗಾರರಿಗೆ ಬುಕ್ಕಿಗಳ ಕುರಿತು, ಕಳ್ಳಾಟದ ಕುರಿತು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಇಷ್ಟೇ ಅಲ್ಲ ಆಟಗಾರರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಎಲ್ಲಾ ಕ್ರಿಕೆಟಿಗರು ಕ್ರೀಡಾ ಸ್ಪೂರ್ತಿಯಿಂದ ಆಡುತ್ತಿದ್ದಾರೆ. ಇದು ಅತೀ ದೊಡ್ಡ ಗೆಲುವು ಎಂದು ಅಜಿತ್ ಸಿಂಗ್ ಹೇಳಿದ್ದಾರೆ