ಕೋಲ್ಕತಾ(ಡಿ.19): 2020ರ ಐಪಿಎಲ್‌ಗಾಗಿ ಗುರುವಾರ ಕೋಲ್ಕತಾದಲ್ಲಿ ನಡೆಯಲಿರುವ ಆಟಗಾರರ ಹರಾಜಿನಲ್ಲಿ 332 ಮಂದಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಬಿಸಿಸಿಐ 971 ಆಟಗಾರರ ಪಟ್ಟಿಯನ್ನು 332 ಆಟಗಾರರಿಗೆ ಇಳಿಸಿದೆ. 332 ಆಟಗಾರರ ಪೈಕಿ 8 ತಂಡಗಳು ಸೇರಿ ಒಟ್ಟು 73 ಆಟಗಾರರನ್ನು ಖರೀದಿಸಬಹುದಾಗಿದೆ. ಮೊದಲು ಬ್ಯಾಟ್ಸ್‌ಮನ್‌ಗಳ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬಳಿಕ ಆಲ್ರೌಂಡರ್‌ಗಳು, ವಿಕೆಟ್‌ ಕೀಪರ್‌ಗಳು, ವೇಗಿಗಳು ಹಾಗೂ ಸ್ಪಿನ್ನರ್‌ಗಳ ಹರಾಜು ನಡೆಯಲಿದೆ.

IPL ಹರಾಜಿಗೂ ಮುನ್ನ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ ವಿರಾಟ್ ಕೊಹ್ಲಿ !

ಗ್ಲೆನ್‌ ಮ್ಯಾಕ್ಸ್‌ವೆಲ್‌, ಕ್ರಿಸ್‌ ಲಿನ್‌, ಪ್ಯಾಟ್‌ ಕಮಿನ್ಸ್‌, ಜೋಸ್ ಹೇಜಲ್‌ವುಡ್‌, ಡೇಲ್‌ ಸ್ಟೇನ್‌ ಹಾಗೂ ಏಂಜೆಲೋ ಮ್ಯಾಥ್ಯೂಸ್‌, ರಾಬಿನ್‌ ಉತ್ತಪ್ಪ, ಆ್ಯರೋನ್‌ ಫಿಂಚ್‌ರಂತಹ ಘಟಾನುಘಟಿಗಳು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು, ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷ ವಿದೇಶಿ ಆಟಗಾರರಿಗೆ ಹೆಚ್ಚಿನ ಬೇಡಿಕೆ ಇರಲಿದೆ ಎಂದು ವಿಶ್ಲೇಷಿಸಲಾಗಿದೆ.

IPL Auction: ಈ ಐವರು ವಿದೇಶಿ ಕ್ರಿಕೆಟಿಗರು ಮಾರಾಟವಾಗುವುದು ಖಚಿತ?

ರಾಜ್ಯದ 13 ಆಟಗಾರರು: ಹರಾಜಿನಲ್ಲಿ ಕರ್ನಾಟಕದ ಒಟ್ಟು 13 ಆಟಗಾರರು ಪಾಲ್ಗೊಳ್ಳಲಿದ್ದಾರೆ. ದೇಸಿ ಟೂರ್ನಿಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಕೆ.ವಿ.ಸಿದ್ಧಾರ್ಥ್, ಶಿವಿಲ್‌ ಕೌಶಿಕ್‌, ಲುವ್ನಿತ್‌ ಸಿಸೋಡಿಯಾ, ಶುಭಾಂಗ್‌ ಹೆಗ್ಡೆ, ಕೆ.ಸಿ.ಕಾರ್ಯಪ್ಪ, ಪವನ್‌ ದೇಶಪಾಂಡೆ, ಆರ್‌.ಸಮರ್ಥ್, ಅನಿರುದ್ಧ ಜೋಶಿ, ರೋಹನ್‌ ಕದಂ, ಪ್ರವೀಣ್‌ ದುಬೆ ಜತೆ ಕೇರಳ ತಂಡಕ್ಕೆ ವಲಸೆ ಹೋಗಿರುವ ರಾಬಿನ್‌ ಉತ್ತಪ್ಪ, ನಾಗಾಲ್ಯಾಂಡ್‌ಗೆ ವಲಸೆ ಹೋಗಿರುವ ಸ್ಟುವರ್ಟ್‌ ಬಿನ್ನಿ ಹಾಗೂ ರೈಲ್ವೇಸ್‌ ಪರ ಆಡುವ ಪ್ರದೀಪ್‌ ತಿಪ್ಪೇಸ್ವಾಮಿ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.

ಹರಾಜಿನಲ್ಲಿ 186 ಭಾರತೀಯರು

ಹರಾಜಿಗೆ ನೋಂದಾಯಿಸಿಕೊಂಡಿರುವ ಒಟ್ಟು 322 ಆಟಗಾರರ ಪೈಕಿ 186 ಭಾರತೀಯ ಆಟಗಾರರು, 143 ವಿದೇಶಿ ಆಟಗಾರರು, ಮೂವರು ಐಸಿಸಿ ಸಹಾಯಕ ರಾಷ್ಟ್ರಗಳ ಆಟಗಾರರು ಇದ್ದಾರೆ. 7 ಆಟಗಾರರು ತಮ್ಮ ಮೂಲೆಬೆಲೆಯನ್ನು 2 ಕೋಟಿ ರುಪಾಯಿಗೆ ನಿಗದಿಪಡಿಸಿಕೊಂಡರೆ, 10 ಆಟಗಾರರು 1.5 ಕೋಟಿ, 23 ಆಟಗಾರರು 1 ಕೋಟಿ ರುಪಾಯಿ ಮೂಲಬೆಲೆ ಹೊಂದಿದ್ದಾರೆ. 

2019ರ ಹರಾಜಿನಲ್ಲಿ ಆಟಗಾರರ ಖರೀದಿಗೆ ತಂಡಗಳಿಗೆ ಒಟ್ಟು 82 ಕೋಟಿ ನಿಗದಿಪಡಿಸಲಾಗಿತ್ತು. ಈ ವರ್ಷ 3 ಕೋಟಿ ಹೆಚ್ಚುವರಿಯಾಗಿ ನೀಡಲಾಗಿದೆ. ಒಂದು ತಂಡ ಕನಿಷ್ಠ 18, ಗರಿಷ್ಠ 25 ಆಟಗಾರರನ್ನು ಹೊಂದಲು ಅವಕಾಶವಿದೆ. ಗರಿಷ್ಠ 8 ವಿದೇಶಿ ಆಟಗಾರರು ತಂಡದಲ್ಲಿರಬಹುದು.

ನಿರೀಕ್ಷೆ ಹೆಚ್ಚಿಸಿರುವ ಅಗ್ರ 10 ಆಟಗಾರರು

ಆಟಗಾರ ಮೂಲಬೆಲೆ

ಕ್ರಿಸ್‌ ಲಿನ್‌    2 ಕೋಟಿ

ಮ್ಯಾಕ್ಸ್‌ವೆಲ್‌  2 ಕೋಟಿ

ಎವಿನ್‌ ಲೆವಿಸ್‌ 1 ಕೋಟಿ

ಜೇಸನ್‌ ರಾಯ್‌ 1.5 ಕೋಟಿ

ಪ್ಯಾಟ್‌ ಕಮಿನ್ಸ್‌   2 ಕೋಟಿ

ಆ್ಯರೋನ್‌ ಫಿಂಚ್‌ 1 ಕೋಟಿ

ರೋಹನ್‌ ಕದಂ    20 ಲಕ್ಷ

ಯಶಸ್ವಿ ಜೈಸ್ವಾಲ್‌ 20 ಲಕ್ಷ

ಟಾಮ್‌ ಬ್ಯಾಂಟನ್‌ 1 ಕೋಟಿ

ಜೇಮ್ಸ್‌ ನೀಶಮ್‌   50 ಲಕ್ಷ