ಪಕ್ಷದ ಕಾರ್ಯಕರ್ತರು ಈ ವಿಡಿಯೋವನ್ನು "ನಾಚಿಕೆಗೇಡಿನದು" ಎಂದು ಕರೆದಿದ್ದು, ಬಿಜೆಪಿ ನಾಯಕತ್ವಕ್ಕೆ ಔಪಚಾರಿಕ ದೂರು ದಾಖಲಿಸಿದ್ದಾರೆ. ಬಿಜೆಪಿ ಗೊಂಡಾ ಮುಖ್ಯಸ್ಥ ಅಮರ್ ಕಿಶೋರ್ ಕಶ್ಯಪ್ ಅವರ ವರ್ತನೆಯ ಬಗ್ಗೆ ಏಳು ದಿನಗಳಲ್ಲಿ ವಿವರಣೆ ನೀಡುವಂತೆ ಪಕ್ಷವು ಕೇಳಿದೆ. 

ನವದೆಹಲಿ (ಮೇ.26): ಪಕ್ಷದ ಕಚೇರಿಯಲ್ಲಿ ಮಹಿಳೆಯನ್ನು ಅಪ್ಪಿಕೊಂಡಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲ್ಲಿಯೇ ಉತ್ತರ ಪ್ರದೇಶದ ಬಿಜೆಪಿ ನಾಯಕನಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಲಕ್ನೋದಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ಗೊಂಡಾದಲ್ಲಿರುವ ಜಿಲ್ಲಾ ಪಕ್ಷದ ಕಚೇರಿಯಲ್ಲಿ ಬಿಜೆಪಿ ನಾಯಕನ ಲವ್ವಿ-ಡವ್ವಿ ವಿಡಿಯೋ ವೈರಲ್‌ ಆಗಿತ್ತು. ಈ ಅನುಚಿತ ವಿಡಿಯೋ ಕುರಿತು ವಿವರಣೆ ನೀಡುವಂತೆ ಪಕ್ಷವು ನೋಟಿಸ್ ಕಳುಹಿಸಿದೆ.

ಪಕ್ಷದ ಕಾರ್ಯಕರ್ತರು ಈ ವಿಡಿಯೋವನ್ನು "ನಾಚಿಕೆಗೇಡಿನದು" ಎಂದು ಕರೆದಿದ್ದು, ಬಿಜೆಪಿ ನಾಯಕತ್ವಕ್ಕೆ ಔಪಚಾರಿಕ ದೂರು ದಾಖಲಿಸಿದ್ದಾರೆ. ಬಿಜೆಪಿ ಗೊಂಡಾ ಮುಖ್ಯಸ್ಥ ಅಮರ್ ಕಿಶೋರ್ ಕಶ್ಯಪ್ ಅವರ ವರ್ತನೆಯ ಬಗ್ಗೆ ಏಳು ದಿನಗಳಲ್ಲಿ ವಿವರಣೆ ನೀಡುವಂತೆ ಪಕ್ಷವು ಕೇಳಿದೆ.

"ಸೋಶಿಯಲ್‌ ಮೀಡಿಯಾದಲ್ಲಿ ಪ್ರಸಾರವಾದ ವೀಡಿಯೊ ಪಕ್ಷದ ಖ್ಯಾತಿಗೆ ನಕಾರಾತ್ಮಕ ಪರಿಣಾಮ ಬೀರುವ ಮತ್ತು ಅಶಿಸ್ತಿನ ವರ್ಗಕ್ಕೆ ಬರುವ ನಡವಳಿಕೆಯನ್ನು ಬೆಳಕಿಗೆ ತಂದಿದೆ" ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ ನಾರಾಯಣ್ ಶುಕ್ಲಾ ಅವರು ಕಶ್ಯಪ್ ಅವರಿಗೆ ನೋಟಿಸ್ ನೀಡಿದ್ದಾರೆ.

"ರಾಜ್ಯ ಅಧ್ಯಕ್ಷರ ಸೂಚನೆಗಳ ಪ್ರಕಾರ, ಏಳು ದಿನಗಳಲ್ಲಿ ಬಿಜೆಪಿ ರಾಜ್ಯ ಕಚೇರಿಗೆ ಲಿಖಿತ ವಿವರಣೆಯನ್ನು ಸಲ್ಲಿಸಲು ನಿಮ್ಮನ್ನು ಕೇಳಲಾಗಿದೆ. ನಿಗದಿತ ಸಮಯದಲ್ಲಿ ತೃಪ್ತಿದಾಯಕ ಪ್ರತಿಕ್ರಿಯೆಯನ್ನು ನೀಡಲು ವಿಫಲವಾದರೆ ಕಠಿಣ ಶಿಸ್ತು ಕ್ರಮಕ್ಕೆ ಆಹ್ವಾನ ನೀಡಲಾಗುವುದು" ಎಂದು ಅದು ಹೇಳಿದೆ.

ಈ ವಿಡಿಯೋವನ್ನು ಏಪ್ರಿಲ್ 12 ರಂದು ರೆಕಾರ್ಡ್ ಮಾಡಲಾಗಿದೆ ಎಂದು ವರದಿಯಾಗಿದೆ. ಮಹಿಳೆ ತನಗೆ ಕರೆ ಮಾಡಿ ತಾನು ಅಸ್ವಸ್ಥಳಾಗಿದ್ದು, ವಿಶ್ರಾಂತಿ ಪಡೆಯಲು ಸ್ಥಳ ಬೇಕು ಎಂದು ಹೇಳಿದ್ದಾಳೆ ಎಂದು ಅಮರ್ ಕಿಶೋರ್ ಕಶ್ಯಪ್ ಹೇಳಿಕೊಂಡಿದ್ದಾರೆ.

"ಆ ಮಹಿಳೆ ನಮ್ಮ ಪಕ್ಷದ ಸಕ್ರಿಯ ಸದಸ್ಯೆ. ಅವರು ನನಗೆ ಕರೆ ಮಾಡಿ, 'ಅಧ್ಯಕ್ಷರೇ, ನನಗೆ ಹುಷಾರಿಲ್ಲ. ನಾನು ವಿಶ್ರಾಂತಿ ಪಡೆಯಲು ಬಯಸುತ್ತೇನೆ. ಸ್ವಲ್ಪ ಹೊತ್ತು ಉಳಿಯಲು ಸ್ಥಳ ಕೊಡಿ' ಎಂದು ಹೇಳಿದರು. ಹಾಗಾಗಿ ನಾನು ಅವರನ್ನು ಕರೆದುಕೊಂಡು ಕಚೇರಿಗೆ ಕರೆತಂದೆ," ಎಂದು ಕಶ್ಯಪ್ ತಿಳಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಮಹಿಳೆ ಕಾರಿನಿಂದ ಇಳಿಯುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇನ್ನೊಂದು ವಿಡಿಯೋದಲ್ಲಿ ಸಲ್ವಾರ್‌ ಕಮೀಜ್‌ ಧರಿಸಿ ಬ್ಯಾಗ್‌ ಹಾಕಿಕೊಂಡು ಬಂದಿರುವ ಮಹಿಳೆ ಮೆಟ್ಟಿಲಿನ ಬಳಿ ನಿಂತಿರುವುದು ಕಂಡಿದೆ.

ಆಕೆಯ ಹಿಂದೆಯೇ ರಾಜಕಾರಣಿ ಕೂಡ ಬಂದಿದ್ದಾನೆ. ಈ ವೇಳೆ ಮಹಿಳೆಯ ಭುಜಕ್ಕೆ ಕೈಹಾಕುತ್ತಾನೆ. ಕೆಲವು ಹೆಜ್ಜೆ ನಡೆದ ಬಳಿಕ ಆಕೆಯನ್ನು ತಬ್ಬಿಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಕೆಲ ಕ್ಷಣ ತಬ್ಬಿಕೊಂಡ ಬಳಿಕ, ರಾಜಕಾರಣಿ ಮೆಟ್ಟಿಲುಗಳನ್ನು ಏರಲು ಆರಂಭಿಸಿದರೆ, ಮಹಿಳೆ ಆತನ ಹಿಂದಯೇ ಹೋಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.

"ಮೆಟ್ಟಿಲುಗಳನ್ನು ಹತ್ತುವಾಗ ಆಕೆಗೆ ತಲೆ ಸುತ್ತುವ ಅನುಭವವಾಯಿತು, ಮತ್ತು ನಾನು ಆಕೆಗೆ ಬೆಂಬಲವಾಗಿ ಅವಳ ಕೈ ಹಿಡಿದೆ. ಆಕೆ ನನ್ನ ಕೈಯನ್ನೂ ಹಿಡಿದಿದ್ದಳು. ನನ್ನ ಮೇಲೆ ಅಪಪ್ರಚಾರ ಮಾಡಲು ದೃಶ್ಯಾವಳಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ" ಎಂದು ತಮ್ಮನ್ನು ಕಶ್ಯಪ್‌ ಸಮರ್ಥಿಸಿಕೊಂಡಿದ್ದಾರೆ.

"ನಾವು ನಮ್ಮ ಕಾರ್ಯಕರ್ತರಿಗೆ ಸಹಾಯ ಮಾಡದಿದ್ದರೆ ಯಾರಿಗೆ ಸಹಾಯ ಮಾಡಬೇಕು? ಕಾರ್ಯಕರ್ತರಿಗೆ ಸಹಾಯ ಮಾಡುವುದು ಅಪರಾಧವಾಗಿದ್ದರೆ ನಾವು ಅದರ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.