ಭಾರೀ ಮಳೆಯಿಂದಾಗಿ ಬಾವಿಯೊಂದು ಕುಸಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ತಿರುವನಂತಪುರ: ಕಳೆದ ಒಂದು ವಾರದಿಂದ ಭಾರತದ ದಕ್ಷಿಣ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂಗಾರ ಪ್ರವೇಶಕ್ಕೂ ಮುನ್ನವೇ ಆರಂಭವಾದ ಮಳೆ ಹಲವು ಅನಾಹುತಗಳನ್ನು ಸೃಷ್ಟಿಸುತ್ತಿದೆ. ಕರಾವಳಿ ಭಾಗದಲ್ಲಿ ರೆಡ್‌ ಅಲರ್ಟ್ ಘೋಷಣೆ ಮಾಡಲಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಭಾರೀ ಮಳೆಗೆ ರಾಜಧಾನಿ ಮುಂಬೈ ತತ್ತರಿಸಿದ್ದು, ನಗರದಲ್ಲಿ ಎಲ್ಲಿ ನೋಡಿದ್ರೂ ಮಳೆನೀರು ಕಾಣಿಸುತ್ತಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ವಾಕ್ಕಾಡಿಯಲ್ಲಿ ನೋಡ ನೋಡುತ್ತಿದ್ದಂತೆ ಬಾವಿಯೊಂದು ಕುಸಿದಿದೆ. 

ವಾಕ್ಕಡ್ ನಿವಾಸಿ ಮುಹಮ್ಮದ್ ಅಲಿ ಅವರ ಮನೆಯ ಬಾವಿ ಕುಸಿದಿದೆ. ಬಾವಿ ಕುಸಿಯುತ್ತಿರುವ ದೃಶ್ಯಗಳನ್ನು ಮೊಬೈಲ್‌ನಲ್ಲಿ ಮುಹಮ್ಮದ್ ಕುಟುಂಬಸ್ಥರು ಸೆರೆ ಹಿಡಿದುಕೊಂಡಿದ್ದಾರೆ. ಮೊದಲಿಗೆ ವಿಚಿತ್ರವಾದ ಶಬ್ದ ಕೇಳಿದೆ. ಹೊರಗೆ ಬಂದು ನೋಡುವಷ್ಟರಲ್ಲಿ ಬಾವಿ ಕುಸಿಯುತ್ತಿತ್ತು ಎಂದು ಮುಹಮ್ಮದ್ ಕುಟುಂಬಸ್ಥರು ಹೇಳಿದ್ದಾರೆ.

ಬೆಳಗ್ಗೆ ಎದ್ದು ಮೋಟಾರ್ ಹಾಕಿದೆ. ಸ್ವಲ್ಪ ಹೊತ್ತಾದ್ರೂ ನೀರು ಬರಲಿಲ್ಲ. ಆಮೇಲೆ ಆಫ್ ಮಾಡಿದೆ. ಹೋಗಿ ನೋಡಿದ್ರೆ ಬಾವಿಯ ನೀರೆಲ್ಲ ಕೆಸರು ಮಿಶ್ರಿತವಾಗಿತ್ತು. ಏನೋ ಶಬ್ದ ಕೇಳಿ ಮತ್ತೆ ನೋಡಿದೆ. ನೋಡ್ತಿದ್ದಂತೆ ಬಾವಿ ನಿಧಾನವಾಗಿ ಕುಸಿದು ಹೋಯ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮುಂದಿನ ಐದು ದಿನ ಮಳೆ ಮುಂದುವರಿಯಲಿದೆ

ಮುಂದಿನ ಐದು ದಿನ ಪಶ್ಚಿಮ ಮಾರುತಗಳು ಕೇರಳದ ಮೇಲೆ ಪ್ರಬಲವಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರದ ಮೇಲೆ ವಾಯುಭಾರ ಕುಸಿತ ಉಂಟಾಗಿದೆ. ಮೇ 27ರ ಹೊತ್ತಿಗೆ ಮಧ್ಯ ಪಶ್ಚಿಮ - ಉತ್ತರ ಬಂಗಾಳ ಕೊಲ್ಲಿಯ ಮೇಲೆ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಕೇರಳದಲ್ಲಿ ಮುಂದಿನ ಐದು ದಿನ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಇಂದು ಭಾರೀ ಮಳೆಯಾಗುವ ಹಾಗೂ 26 ರಿಂದ 30 ರವರೆಗೆ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕೇರಳದಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರ್, ಕಾಸರಗೋಡು ಜಿಲ್ಲೆಗಳಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಕೋಝಿಕ್ಕೋಡ್, ವಯನಾಡ್, ಕಣ್ಣೂರ್ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗಲಿದೆ.

ಶಾಲೆಗಳಿಗೆ ರಜೆ

ಕಣ್ಣೂರು ಜಿಲ್ಲೆಯಲ್ಲಿ ಘೋಷಿಸಲಾದ ರೆಡ್ ಅಲರ್ಟ್ ಮತ್ತು ನಿರಂತರ ಮಳೆಯಿಂದಾಗಿ, ಜಿಲ್ಲಾಧಿಕಾರಿಗಳು ಮೇ 27, ಮಂಗಳವಾರ ಜಿಲ್ಲೆಯ ಅಂಗನವಾಡಿಗಳು, ಮದರಸಾಗಳು, ಬೋಧನಾ ಕೇಂದ್ರಗಳು ಮತ್ತು ವಿಶೇಷ ತರಗತಿಗಳಿಗೆ ರಜೆ ಘೋಷಿಸಿದ್ದಾರೆ. ಅಂಗನವಾಡಿ ನೌಕರರಿಗೆ ರಜೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಯ್ಯನ್ನೂರಿನ ಪೆರಿಂಥಟ್ಟಾದಲ್ಲಿ ಮನೆ ಮೇಲೆ ಮರ ಬಿದ್ದು ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವರು ಸುರೇಶ್ ಕುಮಾರ್ ಮತ್ತು ಅವರ ತಾಯಿ ನಿರ್ಮಲಾ, ಇಬ್ಬರೂ ಪೆರಿಂಥಟ್ಟಾ ಮೂಲದವರು. 

ಎಲಯವೂರ್‌ನಲ್ಲಿ ಬಲವಾದ ಗಾಳಿ ಬೀಸಿದ್ದರಿಂದ ಛಾವಣಿಗಳು ಕುಸಿದವು. ವ್ಯಾಪಕ ಬೆಳೆ ಹಾನಿಯಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಮರಗಳು ಉರುಳಿ ಬಿದ್ದಿವೆ. ಕೊಟ್ಟಿಯೂರಿನಲ್ಲಿ ಇಂದು ಬೆಳಿಗ್ಗೆ ಮರವೊಂದು ಮನೆಯ ಮೇಲೆ ಬಿದ್ದು ಮನೆ ಮಾಲೀಕರು ಗಾಯಗೊಂಡಿದ್ದಾರೆ.

ಕೊಟ್ಟಿಯೂರು ಪ್ರದೇಶದಲ್ಲಿ ಸುಮಾರು ಹತ್ತು ಮನೆಗಳು ನಾಶವಾಗಿವೆ. ಬೆಟ್ಟದ ಮೇಲಿನ ಮಾಣಿಕ್ಕಡವು, ಚಪ್ಪತ್, ವಾಯತ್ತೂರು ಸೇತುವೆಗಳು ಮುಳುಗಡೆಯಾಗಿವೆ. ಕುಪ್ಪಂ ನದಿ ತನ್ನ ದಡಗಳನ್ನು ತುಂಬಿ ಹರಿಯುತ್ತಿದೆ. ಕುಪ್ಪಂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರದೇಶದಲ್ಲಿ ಭೂಕುಸಿತ ಉಂಟಾಗಿರುವುದರಿಂದ ಸಂಚಾರ ಇನ್ನೂ ಪುನರಾರಂಭಗೊಂಡಿಲ್ಲ.