ಕಾರವಾರ[ಡಿ.13]: ಗೋವಾ ಸರ್ಕಾರದ ಆದೇಶದಂತೆ ಗುಣಮಟ್ಟಕ್ಕೆ ಸಂಬಂಧಿಸಿ ಎಫ್‌ಡಿಎ ಪರವಾನಗಿ ಇದ್ದರೂ ಅಲ್ಲಿನ ಅಧಿಕಾರಿಗಳು ಮೀನು ಸಾಗಣೆ ಮಾಡುತ್ತಿದ್ದ ಕರ್ನಾಟಕದ ವಾಹನ ತಡೆದು ಮೀನುಗಳನ್ನು ಡಂಪಿಂಗ್‌ ಯಾರ್ಡ್‌ಗೆ ಎಸೆದಿದ್ದಾರೆ ಎಂದು ಮೀನು ಮಾರಾಟಗಾರ ಸಹಕಾರಿ ಫೆಡರೇಷನ್‌ ಜಿಲ್ಲಾಧ್ಯಕ್ಷ ಗಣಪತಿ ಮಾಂಗ್ರೆ ಆರೋಪಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಮೀನು ಮಾರಾಟಗಾರ ರೋಹಿದಾಸ ತಾಂಡೇಲ್‌ ಶೀತಲೀಕರಣ ವ್ಯವಸ್ಥೆ ಇರುವ ವಾಹನದಲ್ಲಿ ಎಫ್‌ಡಿಎ ಪರವಾನಗಿ ಪಡೆದು ಶನಿವಾರ ಗೋವಾಕ್ಕೆ ಮೀನು ತೆಗೆದುಕೊಂಡು ಹೋಗಿದ್ದರು. ಆದರೆ ಅರ್ಧದಲ್ಲಿ ಅವರ ವಾಹನ ತಡೆದ ಗೋವಾ ಅಧಿಕಾರಿಗಳು, ಫಾರ್ಮಾಲಿನ್‌ ಇರುವ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಪೊಲೀಸ್‌ ಠಾಣೆಗೆ ವಾಹನ ಸಮೇತ ಕರೆದೊಯ್ದರು. ರೋಹಿದಾಸ ತೆಗೆದುಕೊಂಡು ಹೋಗಿದ್ದ ಮೀನಿನಲ್ಲಿ ಫಾರ್ಮಾಲಿನ್‌ ಇಲ್ಲ ಎಂದು ಹೇಳಿಯೂ ಭಾನುವಾರವೂ ಇರಿಸಿಕೊಂಡರು. ನಂತರ ಯಾವ ವಿಳಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೀರೆಂದು ಸರಿಯಾಗಿ ನಮೂದಿಸಿಲ್ಲ. ಹೀಗಾಗಿ ನಾವು ಮೀನನ್ನು ಮುಂದೆ ಸಾಗಲು ಬಿಡುವುದಿಲ್ಲ. ಎಲ್ಲ ಮೀನನ್ನು ನಾಶ ಮಾಡುತ್ತೇವೆ ಎಂದು ಗೋವಾ ಡಂಪಿಂಗ್‌ ಯಾರ್ಡ್‌ಗೆ ತೆಗೆದುಕೊಂಡು ಹೋಗಿ ಕಸದ ತೊಟ್ಟಿಗೆ ಚೆಲ್ಲಿದ್ದಾರೆ. ಅಲ್ಲಿನ ಅಧಿಕಾರಿಗಳ ಬಳಿ ವಾಪಸ್‌ ಕರ್ನಾಟಕಕ್ಕೆ ತೆಗೆದುಕೊಂಡು ಹೋಗುವುದಾಗಿ ಎಷ್ಟೇ ಬೇಡಿಕೊಂಡರೂ ವಾಪಸ್‌ ನೀಡಿಲ್ಲ. ಎಸೆಯುವ ಬದಲು ವಾಪಸ್‌ ನೀಡಬಹುದಿತ್ತು. 800ರಿಂದ 1,000 ಕಿಗ್ರಾಂ ತೂಕದ . 10 ಲಕ್ಷ ಮೌಲ್ಯದ ಇಸೋಣ (ಕಿಂಗ್‌ಫಿಶ್‌) ಮೀನನ್ನು ನಾಶ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋವಾ-ಕರ್ನಾಟಕ ಮೀನು ಬಿಕ್ಕಟ್ಟು ಅಂತ್ಯ!

ಕ್ಷುಲ್ಲಕ ಕಾರಣಕ್ಕೆ 10 ಲಕ್ಷ ಮೌಲ್ಯದ ಮೀನು ನಾಶ ಮಾಡಿರುವುದು ಸರಿಯಲ್ಲ. ಇದು ಗೋವಾ ಸರ್ಕಾರದ ಹಾಗೂ ಅಲ್ಲಿನ ಅಧಿಕಾರಿಗಳ ಉದ್ಧಟತನ. ಕಷ್ಟಪಟ್ಟು ಹಿಡಿದು ತಂದ ಮೀನನ್ನು ಈ ರೀತಿ ಅಮಾನವೀಯವಾಗಿ ಕಸದ ತೊಟ್ಟಿಗೆ ಎಸೆದಿದ್ದಾರೆ. ಇಷ್ಟಕ್ಕೆ ಸುಮ್ಮನುಳಿಯದ ಅಧಿಕಾರಿಗಳು 15 ಪುಟದ ವರದಿ ತಯಾರಿಸಿ ಅದರ ಮೇಲೆ ರೋಹಿದಾಸ ಅವರಿಂದ 30ಕ್ಕೂ ಹೆಚ್ಚು ಸಹಿ ಪಡೆದುಕೊಂಡಿದ್ದಾರೆ. ವರದಿಯಲ್ಲಿ ಏನಿದೆ ಎಂದು ಕೇಳಿದರೂ ಹೇಳಲಿಲ್ಲ. ಸಹಿ ಹಾಕುವುದಿಲ್ಲ ಎಂದಿದ್ದಕ್ಕೆ ಹಲ್ಲೆಗೆ ಮುಂದಾಗಿದ್ದರು ಎಂದು ಅಳಲು ತೋಡಿಕೊಂಡರು.

ಗೋವಾಗೆ ಹೋಗುವ ಪ್ಲ್ಯಾನ್ ಇದೆಯಾ?: ಹಾಗಾದ್ರೆ ಈ ಸುದ್ದಿ ತಪ್ಪದೇ ಓದಿ

ಜಿಲ್ಲಾ ಮೀನುಗಾರ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಪ್ರವೀಣ್‌ ಜಾವಕರ್‌, ಕರ್ನಾಟಕದಿಂದ ಗೋವಾಕ್ಕೆ ಹೋಗುವ ಎಲ್ಲ ವಸ್ತುಗಳನ್ನು ಬಂದ್‌ ಮಾಡಿ ಅವರಿಗೆ ಕರ್ನಾಟಕದ ಅವಶ್ಯಕತೆ ಎಷ್ಟಿದೆ ಎಂಬುದನ್ನು ತೋರಿಸಬೇಕು. ಉತ್ತರ ಕನ್ನಡದಲ್ಲಿ ಬಹುತೇಕ ಮೀನು ವಾಪಾರಸ್ಥರು ಬಡವರು. ಅವರಿಗೆ ಶೀತಲೀಕರಣ ವ್ಯವಸ್ಥೆ ಮಾಡಿಕೊಂಡು ಸಾಗಿಸಲು ಸಾಧ್ಯವಿಲ್ಲ. ಗೋವಾ ಸರ್ಕಾರ ಇದೇ ರೀತಿ ಹುಂಬತನ ಮಾಡುತ್ತಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.