ಪಣಜಿ[ಡಿ.05]: ಗೋವಾ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ಇದೀಗ ಹೋಟೆಲ್‌ ಮತ್ತು ಅತಿಥಿ ಗೃಹಗಳ ಚೆಕ್‌-ಇನ್‌ ವೇಳೆ ಫೋಟೊ ತೆಗೆಸಿಕೊಳ್ಳಲು ಸಿದ್ಧವಾಗಿರಬೇಕು. ಹೌದು, ನಿಷೇಧಿತ ಮಾದಕ ದ್ರವ್ಯದ ಮೇಲೆ ನಿಗಾ ವಹಿಸಲು ಮತ್ತು ಪ್ರವಾಸಿಗರ ಭದ್ರತೆ ನಿಟ್ಟಿನಲ್ಲಿ ಚೆಕ್‌-ಇನ್‌ ಮಾಡುವಾಗಲೇ ಪ್ರವಾಸಿಗರ ಫೋಟೋಗಳನ್ನು ತೆಗೆದಿಟ್ಟುಕೊಳ್ಳಬೇಕು ಎಂದು ಹೋಟೆಲ್‌ ಮತ್ತು ಅತಿಥಿ ಗೃಹಗಳ ಮಾಲಿಕರಿಗೆ ಸೂಚನೆ ನೀಡಲು ನಿರ್ಧರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಲ್ಲದೆ, ಹೋಟೆಲ್‌ ಮತ್ತು ಅತಿಥಿ ಗೃಹಗಳು ಮತ್ತು ಅವುಗಳ ನೌಕರರ ಮೇಲೆಯೂ ಮಾಲಿಕರು ನಿಗಾ ವಹಿಸಬೇಕು. ಜೊತೆಗೆ, ಅಗತ್ಯಬಿದ್ದಾಗ ಹೋಟೆಲ್‌ ಮತ್ತು ಅತಿಥಿಗೃಹಗಳ ಪರಿಶೀಲನೆಗೆ ಬೀಟ್‌ ಪೊಲೀಸರಿಗೂ ಅನುವು ಮಾಡಿಕೊಡಬೇಕು. ಹೋಟೆಲ್‌ಗೆ ಬರುವ-ಹೋಗುವ, ಪಾರ್ಕಿಂಗ್‌, ಎಂಟ್ರಿ, ಎಕ್ಸಿಟ್‌ ಸೇರಿದಂತೆ ಇತರ ಕಡೆಗಳಲ್ಲಿನ ಕನಿಷ್ಠ 30 ದಿನಗಳ ಸಿಸಿಟೀವಿ ಫುಟೇಜ್‌ ಅನ್ನು ಇಟ್ಟುಕೊಂಡಿರಬೇಕು. ಅಗತ್ಯವಿದ್ದಾಗ ಪೊಲೀಸರಿಗೆ ಆ ಫುಟೇಜ್‌ ಅನ್ನು ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.