ಪಣಜಿ[ಡಿ.07]: ಪಕ್ಕದ ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳ ಮೀನು ಆಮದು ಮೇಲೆ ನಿಷೇಧ ಹೇರಿದ್ದ ಗೋವಾ ಸರ್ಕಾರ ಗುರುವಾರ ತನ್ನ ನಿರ್ಧಾರ ಸಡಿಲಿಸಿದೆ. ಕರ್ನಾಟಕದಿಂದ ಮೀನು ಹೊತ್ತ 9 ಲಾರಿಗಳು ದಕ್ಷಿಣ ಗೋವಾದ ಮಡಗಾಂವ್‌ ಮಾರುಕಟ್ಟೆಯನ್ನು ಪ್ರವೇಶಿಸುವ ಮೂಲಕ ಮೀನು ಬಿಕ್ಕಟ್ಟು ಅಂತ್ಯಗೊಂಡಿತು. ಇದೇ ವೇಳೆ ಮೀನು ಹೊತ್ತ 10 ಗೋವಾ ಟ್ರಕ್‌ಗಳು ಕರ್ನಾಟಕದತ್ತ ಸುರಕ್ಷಿತವಾಗಿ ಸಾಗಿದವು.

ಇಂದಿನಿಂದ ಗೋವಾಗೆ ಕರ್ನಾಟಕದ ಮೀನು!

ಮೀನು ಬಹುಕಾಲ ಬಾಳಿಕೆ ಬರುವಂತಾಗಲು, ಫಾರ್ಮಲಿನ್‌ ಅಂಶವನ್ನು ಮೀನಿನಲ್ಲಿ ಸೇರಿಸಲಾಗುತ್ತಿದೆ. ಫಾರ್ಮಲಿನ್‌ ಕ್ಯಾನ್ಸರ್‌ಕಾರಕವಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಕಳೆದ 1 ತಿಂಗಳಿಂದ ಕರ್ನಾಟಕ, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳ ಮೀನು ಆಮದು ನಿಷೇಧಿಸಿತ್ತು. ಇದರಿಂದ ಕರ್ನಾಟಕದಲ್ಲಿ ಮೀನು ಬೆಲೆ ಕುಸಿದಿದ್ದರೆ, ಗೋವಾದಲ್ಲಿ ಮೀನಿಗೆ ಹಾಹಾಕಾರ ಉಂಟಾಗಿತ್ತು. ಮೀನುಗಾರರ ಹಿತದೃಷ್ಟಿಯಿಂದ ನಿಷೇಧ ಹಿಂಪಡೆಯುವಂತೆ ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಅವರಿಗೆ ಪತ್ರ ಬರೆದಿದ್ದರು. ಆದರೆ ಗೋವಾ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಅವರು ನಿಷೇಧ ಹಿಂತೆಗೆತಕ್ಕೆ ನಿರಾಕರಿಸಿದ್ದರು.

ಈ ನಡುವೆ, ನಿಷೇಧ ವಾಪಸಿಗೆ ಗೋವಾ ಸರ್ಕಾರದಲ್ಲಿ ಹಾಗೂ ವ್ಯಾಪಾರಿಗಳಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ನಿಲುವು ಬದಲಿಸಿದ ರಾಣೆ ನಿಷೇಧ ವಾಪಸಿಗೆ ನಿರ್ಧರಿಸಿದ್ದಾರೆ.

ಕರ್ನಾಟಕ ಮೀನಿಗೆ ಗೋವಾ ನಿಷೇಧ!

ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಆಹಾರ ಇಲಾಖೆಯ ಸುರಕ್ಷತಾ ನಿಯಮಾವಳಿಗಳನ್ನು ಪಾಲಿಸುವ ಟ್ರಕ್‌ಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಗೋವಾದಲ್ಲಿನ ಮೀನು ಮಾರಾಟಗಾರರು ಆಹಾರ ಸುರಕ್ಷತಾ ನಿಯಮ ಪಾಲಿಸುತ್ತಿರುವ ಪ್ರಮಾಣಪತ್ರ ಹೊಂದಿದ್ದರೆ ಮಾತ್ರ ಆಮದಿಗೆ ಅವಕಾಶ ನೀಡಲಾಗುತ್ತಿದೆ’ ಎಂದರು.

ಅಲ್ಲದೆ, ಕರ್ನಾಟಕದಿಂದ ಬರುವ ಮೀನು ಸುರಕ್ಷಿತವಾಗಿದೆಯೇ ಎಂಬುದನ್ನು ತಪಾಸಣೆಗೆ ಒಳಪಡಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ರಾಣೆ ಹೇಳಿದರು.