ಮುಂಬೈನ ಬೈಕುಲ್ಲಾದಲ್ಲಿ ಟಿಎಂಸಿ ಸಂಸದ ಯೂಸುಫ್ ಪಠಾಣ್ ಅವರ ಸಂಬಂಧಿಕರು ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಕಾರಿನಿಂದ ನೀರು ಸಿಡಿದ ಸಣ್ಣ ಕಾರಣಕ್ಕೆ ಆರಂಭವಾದ ಜಗಳವು, ದೊಣ್ಣೆ ಮತ್ತು ಬ್ಯಾಟ್‌ಗಳಿಂದ ನಡೆದ ಬರ್ಬರ ಹಲ್ಲೆಯಲ್ಲಿ ಅಂತ್ಯಗೊಂಡಿದೆ.

ಮುಂಬೈ (ಏ.21): ಟಿಎಂಸಿ (TMC) ಸಂಸದ ಹಾಗೂ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರ ಮಾವ ಮತ್ತು ಭಾವ ಸೇರಿದಂತೆ ಮೂವರು ಸಂಬಂಧಿಕರನ್ನು ಮುಂಬೈನ ಬೈಕುಲ್ಲಾ ಪ್ರದೇಶದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.ಕಳೆದ ಶನಿವಾರ ಸ್ಥಳೀಯ ನಿವಾಸಿ ಯೂಸುಫ್ ಖಾನ್ (30) ಎಂಬುವವರು ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿದ್ದ ನೀರಿನ ಗುಂಡಿಯ ಮೇಲೆ ಕಾರು ಚಲಿಸಿದಾಗ, ಪಕ್ಕದಲ್ಲೇ ಇದ್ದ ಯೂಸುಫ್ ಪಠಾಣ್ ಅವರ ಸಂಬಂಧಿ ಶೋಯಬ್ ಖಾನ್ (35) ಅವರ ಮೇಲೆ ನೀರು ಸಿಡಿದಿದೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ಎಎನ್‌ಐ (ANI) ಜೊತೆ ಮಾತನಾಡಿರುವ ಸಂತ್ರಸ್ತ ಯೂಸುಫ್ ಖಾನ್, "ನಾನು ಕ್ಷಮೆ ಕೇಳಲು ಕಾರು ನಿಲ್ಲಿಸಿದೆ, ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಶೋಯಬ್ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಿದಿರಿನ ದೊಣ್ಣೆಯಿಂದ ಕಾರಿನ ಮುಂಭಾಗದ ಗ್ಲಾಸ್ ಒಡೆದಿದ್ದಲ್ಲದೆ, ನನ್ನ ಮೇಲೂ ಹಲ್ಲೆ ನಡೆಸಿದ," ಎಂದು ತಿಳಿಸಿದ್ದಾರೆ.

ಯೂಸುಫ್ ಖಾನ್ ಮನೆಗೆ ತಲುಪಿದಾಗ, ಅವರ ಕುಟುಂಬದವರು ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದರು. ದೂರು ನೀಡಲು ಪೊಲೀಸ್ ಠಾಣೆಗೆ ತೆರಳುವ ಮಾರ್ಗಮಧ್ಯೆ, ಯೂಸುಫ್ ಪಠಾಣ್ ಅವರ ಮಾವ ಖಾಲಿದ್ ಖಾನ್ ಅಲಿಯಾಸ್ ಮಕಾಲಿಕ್ ಎದುರಾಗಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಖಾಲಿದ್ ಖಾನ್ ಅವರೊಂದಿಗೆ ಅವರ ಮಗ ಉಮರ್ಶಾದ್ ಖಾನ್ (35), ಶೋಯಬ್ ಖಾನ್ ಮತ್ತು ಮತ್ತೊಬ್ಬ ಆರೋಪಿ ಶಹಬಾಜ್ ಪಠಾಣ್ ಸೇರಿಕೊಂಡು ಯೂಸುಫ್ ಖಾನ್ ಮತ್ತು ಅವರ ಸಂಬಂಧಿಕರ ಜೊತೆ ಮತ್ತೆ ಜಗಳ ತೆಗೆದಿದ್ದಾರೆ.

ಬಿದಿರಿನ ದೊಣ್ಣೆ, ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ

ಈ ಗ್ಯಾಂಗ್ ಯೂಸುಫ್ ಖಾನ್ ಮತ್ತು ಅವರ ಕುಟುಂಬದವರ ಮೇಲೆ ಬಿದಿರಿನ ದೊಣ್ಣೆ ಹಾಗೂ ಬೇಸ್‌ಬಾಲ್ ಬ್ಯಾಟ್‌ಗಳಿಂದ ಬರ್ಬರವಾಗಿ ಹಲ್ಲೆ ನಡೆಸಿದೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಈ ದಾಳಿಯಲ್ಲಿ ಯೂಸುಫ್ ಖಾನ್ ಅವರ ಸಹೋದರ ಸಲ್ಮಾನ್ ಅವರ ಕೈ ಮೂಳೆ ಮುರಿದಿದ್ದು, ಚಿಕ್ಕಪ್ಪ ಝಾಕಿ ಅಹ್ಮದ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯೂಸುಫ್ ಪಠಾಣ್ ಅವರ ಮಾವ ಸೇರಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ನಾಲ್ಕನೇ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 118(2), 115(2), 324, 352, 351(2) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಮತ್ತು ಹಲ್ಲೆಗೆ ಬಳಸಲಾದ ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Scroll to load tweet…