ನವದೆಹಲಿ(ಡಿ.29): ಆಧುನಿಕ ಭಾರತದ ಯುವಕರು ವ್ಯವಸ್ಥೆಯನ್ನು ನಂಬುವವರಾಗಿದ್ದು, ಮುಂದಿನ ದಿನಗಳಲ್ಲಿ ದೇಶವನ್ನು ಯುವಕರು ಆಳಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇಂದಿನ ಯುವ ಪೀಳಿಗೆ ಅರಾಜಕತೆ, ಅಸ್ಥಿರತೆ, ಜಾತಿವಾದ, ಸ್ವಜನಪಕ್ಷಪಾತಗಳನ್ನು ದ್ವೇಷಿಸುತ್ತಾರೆಂದು ಅಭಿಪ್ರಾಯಪಟ್ಟಿದ್ದಾರೆ.

ಮುಂಬರುವ ದಶಕ ಯುವಕರಲ್ಲಿ ಅಭಿವೃದ್ಧಿಯಷ್ಟೇ ಅಲ್ಲದೆ, ಯುವಕರ ಸಾಮರ್ಥ್ಯಗಳಿಂದ ಪ್ರೇರಿತವಾದ ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಾವು ನಂಬಿರುವುದಾಗಿ ಪ್ರಧಾನಿ ಮೋದಿ ಹೇಳಿದರು. 

ನಾನು ರಾಜಕಾರಣಿ ಆಗಬೇಕು ಎಂದುಕೊಂಡಿರಲಿಲ್ಲ: ಮನ್‌ ಕೀ ಬಾತ್‌ನಲ್ಲಿ ಮೋದಿ ಮಾತು!

ವಿವಿಧ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಶಾಲೆಗಳಲ್ಲಿ ನಾವು ವಿದ್ಯಾಭ್ಯಾಸ ಮಾಡುತ್ತೇವೆ. ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಹಳೆಯ ವಿದ್ಯಾರ್ಥಿಗಳಾಗಿ ಒಂದೊಮ್ಮೆ ಎಲ್ಲರೂ ಭೇಟಿಯಾಗುವ ಅವಕಾಶ ಸಿಗುತ್ತದೆ. ಅಂತಹ ಸಂದರ್ಭದಲ್ಲಿ ಶಾಲೆಯ ಹಳೆಯ ನೆನೆಪುಗಳನ್ನು ಸ್ಮರಿಸುತ್ತೇವೆ. ಅದೊಂದು ವಿಭಿನ್ನವಾದ ಸಂತೋಷ ಎಂದು ಪ್ರಧಾನಿ ಹೇಳಿದರು. 

ಕಳೆದ ಆಗಸ್ಟ್ 15 ರಂದು ಕೆಂಪು ಕೋಟೆಯ ಭಾಷಣದಲ್ಲಿ ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು ಖರೀದಿಸುವಂತೆ ನಾನು ದೇಶವಾಸಿಗಳಲ್ಲಿ ಮನವಿ ಮಾಡಿಕೊಂಡಿದ್ದೆ. ಅದರಂತೆ ಸ್ಥಳೀಯ ವಸ್ತು ಹಾಗೂ ಪದಾರ್ಧಗಳಿಗೆ ಪ್ರಾಮುಖ್ಯತೆ ನೀಡೋಣ ಎಂದು ಮೋದಿ ಹೇಳಿದರು.

100 ವರ್ಷಗಳ ಹಿಂದೆಯೇ ಮಹಾತ್ಮ ಗಾಂಧೀಜಿ ಸ್ವದೇಶಿ ಚಳುವಳಿಯನ್ನು ಮುನ್ನಡೆಸಿದ್ದರು. ಅದರಂತೆ ಇದೀಗ ಮತ್ತೆ ಸ್ವದೇಶಿ ವಸ್ತುಗಳಿಗೆ ಪ್ರಾಮುಖ್ಯತೆ ನೀಡಬೇಕಿದೆ ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.