ನಾನು ರಾಜಕಾರಣಿ ಆಗಬೇಕು ಎಂದುಕೊಂಡಿರಲಿಲ್ಲ: ಮನ್ ಕೀ ಬಾತ್‌ನಲ್ಲಿ ಮೋದಿ ಮಾತು!
ನಾನು ರಾಜಕಾರಣಿ ಆಗಬೇಕು ಎಂದುಕೊಂಡಿರಲಿಲ್ಲ: ಮೋದಿ| ಆದರೆ ಇಂದು ನನ್ನನ್ನು ನಾನು ದೇಶಕ್ಕೆ ಅರ್ಪಿಸಿಕೊಂಡಿದ್ದೇನೆ| ವಿದ್ಯಾರ್ಥಿಯಾಗಿದ್ದಾಗ ಶಿಸ್ತುಬದ್ಧನಾಗಿದ್ದೆ, ಯಾವತ್ತೂ ಶಿಕ್ಷೆ ಅನುಭವಿಸಿರಲಿಲ್ಲ|| ಎನ್‌ಸಿಸಿ ದಿನಾಚರಣೆ ನಿಮಿತ್ತ ‘ಮನ್ ಕಿ ಬಾತ್’ನಲ್ಲಿ ಕೆಡೆಟ್‌ಗಳ ಜತೆ ಸಂವಾದ
ನವದೆಹಲಿ[ನ.25]: ‘ನಾನೆಂದೂ ರಾಜಕೀಯಕ್ಕೆ ಬರುವ ಆಸೆ ಇಟ್ಟುಕೊಂಡಿರಲಿಲ್ಲ. ಆದರೆ ಇಂದು ನಾನು ರಾಜಕೀಯದಲ್ಲಿದ್ದೇನೆ. ಜನರಿಗೆ ಎಷ್ಟುಒಳ್ಳೆಯದು ಮಾಡಲು ಸಾಧ್ಯವೋ ಅಷ್ಟುಒಳ್ಳೆಯದನ್ನು ಮಾಡುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರತಿವರ್ಷ ನವೆಂಬರ್ ಕೊನೆಯ ಭಾನುವಾರವನ್ನು ಎನ್‌ಸಿಸಿ (ನ್ಯಾಷನಲ್ ಕೆಡೆಟ್ ಕೋರ್) ಡೇ ಎಂದು ಆಚರಿಸಲಾಗುತ್ತದೆ. ಈ ನಿಮಿತ್ತ ತಮ್ಮ ಮಾಸಿಕ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಎನ್‌ಸಿಸಿ ಕೆಡೆಟ್‌ಗಳ ಜತೆ ಮೋದಿ ಸಂವಾದ ನಡೆಸಿ, ಈ ಮೇಲಿನಂತೆ ಹೇಳಿದರು.
‘ನಾನೂ ಕೂಡ ಶಾಲಾ ದಿನಗಳಲ್ಲಿ ಎನ್‌ಸಿಸಿ ಕೆಡೆಟ್ ಆಗಿದ್ದೆ. ಯಾವತ್ತೂ ನಾನು ಶಿಕ್ಷೆ ಅನುಭವಿಸಲಿಲ್ಲ. ಏಕೆಂದರೆ ನಾನು ಶಿಸ್ತುಬದ್ಧ ವಿದ್ಯಾರ್ಥಿಯಾಗಿದ್ದೆ’ ಎಂದೂ ಅವರು ಹಾಸ್ಯ ಶೈಲಿಯಲ್ಲಿ ಹೇಳಿದರು.
ಕನ್ನಡದ ಕವಯತ್ರಿ ಸಂಚಿ ಹೊನ್ನಮ್ಮರನ್ನು ನೆನೆದ ಮೋದಿ
ಆಗ ಕೆಡೆಟ್ ಒಬ್ಬರು, ‘ನೀವು ರಾಜಕಾರಣಿ ಆಗದೇ ಹೋದರೆ ಏನಾಗುತ್ತಿದ್ದಿರಿ?’ ಎಂದು ಪ್ರಶ್ನಿಸಿದರು. ‘ಇದು ಕಠಿಣ ಪ್ರಶ್ನೆ. ಪ್ರತಿ ಮಗುವು ಜೀವನದಲ್ಲಿ ವಿವಿಧ ಹಂತಗಳಲ್ಲಿ ಸಾಗುತ್ತದೆ. ಆಗ ಮಗುವು ಒಂದು ಹಂತದಲ್ಲಿ ಹಾಗಾಗಬೇಕು, ಹೀಗಾಗಬೇಕು ಎಂದುಕೊಳ್ಳುತ್ತದೆ. ಆದರೆ ನಾನಂತೂ ರಾಜಕಾರಣಿ ಆಗಬೇಕು ಎಂದು ಎಂದೂ ಅಂದುಕೊಂಡವನಲ್ಲ. ಆ ಬಗ್ಗೆ ನಾನು ಯೋಚಿಸಿಯೂ ಇರಲಿಲ್ಲ’ ಎಂದರು.
‘ಆದರೆ ಇಂದು ನಾನು ರಾಜಕಾರಣಿ ಆಗಿದ್ದೇನೆ. ದೇಶಕ್ಕೆ ಸಂಪೂರ್ಣ ಅರ್ಪಣಾ ಭಾವದಿಂದ ದುಡಿಯುತ್ತಿದ್ದೇನೆ. ನನ್ನನ್ನು ನಾನು ದೇಶಕ್ಕೆ ಸಮರ್ಪಿಸಿಕೊಂಡಿದ್ದೇನೆ’ ಎಂದು ಉತ್ತರಿಸಿದರು.
‘ಶಾಲಾ ದಿನಗಳಲ್ಲಿ ಎನ್‌ಸಿಸಿ ಕ್ಯಾಂಪ್‌ನಲ್ಲಿ ಮರವೊಂದರಲ್ಲಿ ಸಿಕ್ಕಿಹಾಕಿಕೊಂಡ ಪಕ್ಷಿ ರಕ್ಷಿಸಲು ಒಮ್ಮೆ ಮರ ಹತ್ತಿದ್ದೆ’ ಎಂದೂ ಮೋದಿ ಸ್ವಾರಸ್ಯಕರ ರೀತಿಯಲ್ಲಿ ಹೇಳಿದರು.
ಬೆಂಗಳೂರು ಎನ್‌ಸಿಸಿ ಕೆಡೆಟ್ ಜತೆ ಮೋದಿ ಸಂವಾದ
ನವದೆಹಲಿ: ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಬೆಂಗಳೂರಿನ ಜಿ.ವಿ. ಹರಿ ಎಂಬ ಎನ್‌ಸಿಸಿ ಕೆಡೆಟ್ ಜತೆ ಸಂವಾದ ನಡೆಸಿದರು. ‘ನಾನು ಬೆಂಗಳೂರಿನ ಕ್ರಿಸ್ತ ಜಯಂತಿ ಕಾಲೇಜಿನ ವಿದ್ಯಾರ್ಥಿ. ಎನ್‌ಸಿಸಿಯಲ್ಲಿ ಸೀನಿಯರ್ ಅಂಡರ್ ಆಫೀಸರ್ ಆಗಿದ್ದೇನೆ. ನಾನು ಇತ್ತೀಚೆಗೆ ಯುವ ವಿನಿಮಯ ಕಾರ್ಯಕ್ರಮದ ಅಂಗವಾಗಿ ಸಿಂಗಾಪುರಕ್ಕೆ ಹೋಗಿ ಬಂದೆ. ಅಲ್ಲಿ ನಮಗೆ ಸೇನಾ ಕಾರ್ಯಾಚರಣೆ ಹಾಗೂ ಯುದ್ಧ ಕಲೆಗಳ ಬಗ್ಗೆ ತರಬೇತಿ ನೀಡಲಾಯಿತು. ಜಲಸಾಹಸವನನ್ನೂ ಕಲಿತೆ. ಅಲ್ಲಿ ನಡೆದ ವಾಟರ್ ಪೋಲೋ ಸ್ಪರ್ಧೆಯಲ್ಲಿ ಭಾರತ ಗೆದ್ದಿತು’ ಎಂದು ಹರಿ ಹೇಳಿದರು. ಇದಕ್ಕೆ ಮೋದಿ ಅವರು ಹರಿ ಅವರನ್ನು ಅಭಿನಂದಿಸಿ ‘ಇದು ಗ್ರೇಟ್’ ಎಂದು ಶಹಬ್ಬಾಸ್‌ಗಿರಿ ನೀಡಿದರು.
ಮೋದಿಯ ಮನ್ ಕಿ ಬಾತ್‌ನಂತೆ, 'ಲೋಕ ವಾಣಿ' ಆರಂಭಿಸಿದ ಕಾಂಗ್ರೆಸ್ ಸಿಎಂ!