ರೀಲ್ಸ್‌ಗಾಗಿ ರಸ್ತೆಯಲ್ಲಿ ಬೆಂಕಿ ಹಚ್ಚಿದವನ ಕಂಬಿ ಹಿಂದೆ ಕೂರಿಸಿದ ಪೊಲೀಸರು
ಸೋಶಿಯಲ್ ಮೀಡಿಯಾ ಖ್ಯಾತಿಗಾಗಿ ಯುವಕನೊಬ್ಬ ರಸ್ತೆಯಲ್ಲಿ ಬೆಂಕಿ ಹಚ್ಚಿ ವೀಡಿಯೊ ಮಾಡಿದ್ದಾನೆ. ಈ ವೀಡಿಯೊ ವೈರಲ್ ಆದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಫತೇಪುರ್‌ನಲ್ಲಿ ಈ ಘಟನೆ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವುದಕ್ಕಾಗಿ ಕೆಲ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಏನೇನೋ ಕಿತಾಪತಿಗಳನ್ನು ಆಗಾಗ ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಈಗ ಯುವಕನೋರ್ವ ವೀಡಿಯೋಗಾಗಿ ರಸ್ತೆಯಲ್ಲಿ ಬೆಂಕಿಹಚ್ಚಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಮತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಫಾತೇಪರ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಯುವಕನೋರ್ವ ರಾಷ್ಟ್ರೀಯ ಹೆದ್ದಾರಿ-2ರಲ್ಲಿ 2024 ಎಂದು ಬರೆದಿದ್ದಾನೆ. ಬಹುಶಃ ಬೆಂಕಿ ತಾಕಿದರೆ ಉರಿಯಬಲ್ಲಂತಹ ದ್ರವ್ಯದಿಂದ 2024 ಎಂದು ಆತ ಬರೆದಿದ್ದು, ಇದಾದ ನಂತರ ಆತ ಕೂಡಲೇ ಈ 2024ರ ಮೇಲ ಬೆಂಕಿ ಕಡ್ಡಿ ಗೀರಿ ಎಸೆದಿದ್ದಾನೆ. ಬೆಂಕಿ ತಾಕಿದ ಕೂಡಲೇ ಈ 2024 ಎಂದು ಬರೆದಿದ್ದ ಬರಹದ ಮೇಲೆ ಒಮ್ಮೆಗೆ ಬೆಂಕಿ ಹತ್ತಿಕೊಂಡು ಮೇಲೆದಿದ್ದೆ. ಐಷಾರಾಮಿ ಕಾರೊಂದಕ್ಕೆ ಒರಗಿ ನಿಂತುಕೊಂಡು ಯುವಕ ಈ ಕೃತ್ಯವೆಸಗಿದ್ದು, ಬಳಿಕ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ಶೇಕ್ ಬಿಲಾಲ್ ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶದ ಫತೇಪುರ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ -2 ರಲ್ಲಿ ಈ ಘಟನೆ ನಡೆದಿದ್ದು, ಪೆಟ್ರೋಲ್ ಚೆಲ್ಲಿ ಈ ಕೃತ್ಯವೆಸಗಲಾಗಿದೆ ಎಂದು ತಿಳಿದು ಬಂದಿದೆ. ವೀಡಿಯೋ ವೈರಲ್ ಆದ ನಂತರ ನೆಟ್ಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಇದಾದ ನಂತರ ಫಾತೇಪುರ ಪೊಲೀಸರು ಈ ಯುವಕನ ವಿರುದ್ಧ ಪ್ರಕರನ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ಕೆಲ ದಿನಗಳ ಹಿಂದಷ್ಟೇ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಯುವಕನೋರ್ವ ತನ್ನ ಮಹೀಂದ್ರ ಥಾರ್ ಗಾಡಿಯ ಟಾಪ್ ಮೇಲೆ ಮಣ್ಣು ತುಂಬಿಸಿ ಬಳಿಕ ವಾಹನವನ್ನು ರಸ್ತೆಯಲ್ಲಿ ವೇಗವಾಗಿ ಓಡಿಸಿದ್ದ. ರಸ್ತೆಯಲ್ಲಿ ಧೂಳೆಬ್ಬಿಸುವ ಉದ್ದೇಶದಿಂದಲೇ ಯುವಕ ಈ ಕೃತ್ಯವೆಸಗಿದ್ದು, ಆತನ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು ಮೀರತ್‌ನ ಮುಂಡಲಿ ಗ್ರಾಮದ ಇಂತ್‌ಜಾರ್ ಅಲಿ ಎಂಬಾತ ಈ ಕೃತ್ಯವೆಸಗಿದ್ದ. ಈತನ ಈ ಅಪಾಯಕಾರಿ ಕೃತ್ಯದಿಂದಾಗಿ ರಸ್ತೆಯಲ್ಲಿ ಓಡಾಡುವವರು ಇತರ ವಾಹನ ಸವಾರರು ಸಂಕಷ್ಟಕ್ಕೀಡಾಗಿದ್ದರು.