ನಿಮ್ಮವರು ನಮ್ಮವರು, ಒಳ್ಳೆಯವರು ಕೆಟ್ಟವರು, ಉಗ್ರರ ವರ್ಗೀಕರಣ ಅಪಾಯ, ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ!
ವಿಶ್ವಸಂಸ್ಥೆಯಲ್ಲಿ ಭಾರತ ಮತ್ತೆ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ. ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನ ಜನ್ಮಜಾಲಾಡಿದ ಭಾರತ, ಉಗ್ರವಾದ ಪರ ನಿಂತವರಿಗೆ ತಕ್ಕ ಶಾಸ್ತಿ ಮಾಡಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತ್ಯುತ್ತರದ ಪ್ರಮುಖಾಂಶ ಇಲ್ಲಿದೆ.
ಜಿನಿವಾ(ಮಾ.10): ಭಯೋತ್ಪಾದನೆಯಲ್ಲಿ ಒಳ್ಳೆಯವರು ಕೆಟ್ಟವರು ಎಂದಿಲ್ಲ. ನಿಮ್ಮವರು, ನಮ್ಮವರು ಅನ್ನೋದು ಇಲ್ಲ. ಭಯೋತ್ಪಾದಕತೆಯನ್ನು ಈ ರೀತಿ ವರ್ಗೀಕರಿಸುವುದು ಅತ್ಯಂತ ಅಪಾಯ. ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸಿ ಒಕ್ಕೊರಲಿನಿಂದ ವಿರೋಧಿಸಬೇಕು ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಕಠು ಶಬ್ದಗಳಿಂದ ಭಯೋತ್ಪಾದಕತೆ ಹಾಗೂ ಅದನ್ನು ಬೆಂಬಲಿಸುವ ರಾಷ್ಟ್ರಗಳನ್ನು ಟೀಕಿಸಿದ್ದಾರೆ. ಪರೋಕ್ಷವಾಗಿ ಪಾಕಿಸ್ತಾನದ ಉಗ್ರವಾದವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಯೋತ್ಪಾದಕ ದಾಳಿ ಉದ್ದೇಶ ಒಂದೆ. ದಾಳಿ ಬಳಿಕ ಇದನ್ನು ವರ್ಗೀಕರಿಸುವುದು ಅಪಾಯಕಾರಿ. ಭಯೋತ್ಪಾದಕರ ಗುರಿ ಒಂದೇ.ಹೀಗಾಗಿ ಭಯೋತ್ಪಾದಕರನ್ನು ಭಯೋತ್ಪಾದಕರಾಗಿಯೇ ನೋಡಬೇಕು ಎಂದು ರುಚಿರಾ ಕಾಂಬೋಜ್ ಹೇಳಿದ್ದಾರೆ. ಭಯೋತ್ಪಾದಕರ ಯಾವುದೇ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿ ದೇಶ ಭಯೋತ್ಪಾದನೆ ವಿರುದ್ಧ ನಿಲ್ಲಬೇಕು. ಭಯೋತ್ಪಾದನೆಯನ್ನು ಖಂಡಿಸಬೇಕು. ಇಸ್ಲಾಮಾಫೋಬಿಯಾ, ಸಿಖ್ ವಿರೋಧಿ, ಹಿಂದೂ ವಿರೋಧಿ ಸೇರಿದಂತೆ ಯಾವುದೇ ಪೂರ್ವಗ್ರಹ ಪೀಡಿತ ದಾಳಿಯನ್ನು ಖಂಡಿಸಬೇಕು ಎಂದಿದ್ದಾರೆ.
ಮಂಗಳೂರು: ಭಯೋತ್ಪಾದನಾ ಕೃತ್ಯಕ್ಕೆ ದ.ಕ.ದಿಂದ 25 ಕೋಟಿ ರು. ವರ್ಗಾವಣೆ?
ಜಾಗತಿಕ ಭಯೋತ್ಪಾನೆ ನಿಗ್ರಹದ 8ನೇ ಸಮ್ಮೇಳನದ ಕರಡು ನಿರ್ಣಯದಲ್ಲಿ ಮಾತನಾಡಿದ ರುಚಿರಾ ಕಾಂಬೋಜ್, ಭಯೋತ್ಪಾದಕತೆ ವಿರುದ್ಧ ಗುಡುಗಿದ್ದಾರೆ. ಭಯೋತ್ಪಾದನೆ ಅತ್ಯಂತ ಭೀಕರ ಹಾಗೂ ಅತೀ ದೊಡ್ಡ ಸಮಸ್ಯೆ. ಇದನ್ನು ಹಾಗೇ ಪರಿಗಣಿಸಬೇಕು. ಅಗತ್ಯಕ್ಕೆ ತಕ್ಕಂತೆ ನಿಮ್ಮ ಭಯೋತ್ಪಾದಕರು, ನಮ್ಮ ಭಯೋತ್ಪಾದಕರು, ಒಳ್ಳೆ ಭಯೋತ್ಪಾದಕರು, ಕೆಟ್ಟ ಭಯೋತ್ಪಾದಕರು ಎಂದು ವರ್ಗೀಕರಣವೇ ಅಪಾಯ. ಹೀಗೆ ಮಾಡಿದರೆ 9/11ರ ಅವಳಿ ಕಟ್ಟಡಗಳ ಮೇಲಿನ ದಾಳಿನ ಹಿಂದಿನ ಯುಗಕ್ಕೆ ನಾವು ಹಿಂತಿರುಗಬೇಕಾಗುತ್ತದೆ ಎಂದರು.
ಇದೇ ವೇಳೆ ಭಾರತ ಪರೋಕ್ಷವಾಗಿ ಪಾಕಿಸ್ತಾನ ವಿಚಾರ ಎತ್ತಿ ಕಪಾಳಮೋಕ್ಷ ಮಾಡಿತು. ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ, ಆಶ್ರಯ ನೀಡುವ ದೇಶವನ್ನೂ ಹೊಣೆಗಾರರನ್ನಾಗಿ ಮಾಡಬೇಕು.ಉಗ್ರವಾದ, ಉಗ್ರರನ್ನು ಹತ್ತಿಕ್ಕಲು ಕಠಿಣ ಕ್ರಮಗಳ ಅಗತ್ಯವಿದೆ. ಭಾರತ ಎಲ್ಲಾ ರೀತಿಯ ಭಯೋತ್ಪಾದಕ ಕೃತ್ಯವನ್ನು ಖಂಡಿಸುತ್ತದೆ. ಧರ್ಮಆಧಾರಿತ, ನಂಬಿಕೆ ಆಧಾರಿತ ಅಥವಾ ಸಂಸ್ಕೃತಿ ಆಧಾರಿತ ಯಾವುದೇ ಭಯೋತ್ಪಾದನೆಯನ್ನು ಭಾರತ ಕಠುವಾಗಿ ಖಂಡಿಸುತ್ತದೆ ಎಂದರು.
ಮಂಗಳೂರು ಕುಕ್ಕರ್ ಬಾಂಬ್, ಕೊಯಮತ್ತೂರು ಕಾರ್ ಬಾಂಬ್ ಸ್ಫೋಟಕ್ಕೆ ನಾವೇ ಕಾರಣ ಎಂದ ಐಸಿಸ್!
ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರ ಕೆದಕಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿತ್ತು. ಕಾಶ್ಮೀರ ಮಹಿಳೆಯರ ಭದ್ರತೆ, ಶಾಂತಿ ಕುರಿತು ದೂರು ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರುಚಿರಾ ಕಾಂಬೋಜ್, ಪಾಕ್‌ಗೆ ತಿರುಗೇಟು ನೀಡಿದ್ದಾರೆ. ಕ್ಷುಲ್ಲಕ ಮತ್ತು ರಾಜಕೀಯ ಪ್ರೇರಿತ ಹೇಳಿಕೆಗಳು. ಈ ಟೀಕೆಗಳನ್ನು ನಾನು ತಳ್ಳಿಹಾಕುತ್ತೇನೆ. ನನ್ನ ನಿಯೋಗವು ಇಂತಹ ದುರುದ್ದೇಶಪೂರಿತ ಮತ್ತು ಸುಳ್ಳು ಪ್ರಚಾರಗಳು, ಪ್ರತಿಕ್ರಿಯಿಸಲು ಸಹ ಅನರ್ಹವೆಂದು ಪರಿಗಣಿಸುತ್ತದೆ’ ಎಂದರು.‘ನಮ್ಮ ಗಮನವು ಧನಾತ್ಮಕವಾಗಿದ್ದು, ಯಾವತ್ತೂ ಮುಂದಾಲೋಚನೆಯತ್ತ ಗಮನ ಹರಿಸುತ್ತೇವೆ. ಮಹಿಳೆಯರು ಮತ್ತು ಅವರ ಭದ್ರತಾ ಕಾರ್ಯಸೂಚಿಯ ಅನುಷ್ಠಾನಕ್ಕೆ ಆದ್ಯತೆ ನೀಡುತ್ತೇವೆ’ ಎಂದರು. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣ ಪ್ರದೇಶಗಳು ಭಾರತದ ಭಾಗವಾಗಿವೆ ಮತ್ತು ಯಾವಾಗಲೂ ಇರುತ್ತವೆ ಎಂದು ಭಾರತವು ಈ ಹಿಂದೆ ಪಾಕಿಸ್ತಾನಕ್ಕೆ ತಿಳಿಸಿತ್ತು.