Asianet Suvarna News Asianet Suvarna News

ಆನ್ಲೈನ್‌ ಗೇಮ್‌ನಿಂದ ಹುಚ್ಚು: ಬೀದಿಯಲ್ಲಿ ಓಡಿದ ಯುವಕನ ಹಗ್ಗದಲ್ಲಿ ಕಟ್ಟಿ ಹಾಕಿದ ಜನ

  • ಆನ್ಲೈನ್‌ ಗೇಮ್‌ನಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಯುವಕ
  • ರಾಜಸ್ತಾನದ ಚಿತ್ತೊರಗಢದಲ್ಲಿ ಘಟನೆ
  • ಬೀದಿಯಲ್ಲಿ ಓಡಾಟ, ಹಿಡಿದು ಕಟ್ಟಿ ಹಾಕಿದ ಜನ
young man from chittorgarh Mental condition critical who addicted to online games akb
Author
Bangalore, First Published Mar 27, 2022, 7:08 PM IST

ಚಿತ್ತೋರಗಢ:(ಮಾ.27): ಆನ್‌ಲೈನ್‌ ಗೇಮ್‌ಗೆ ದಾಸನಾಗಿದ್ದ ಯುವಕನೋರ್ವ ಮಾನಸಿಕ ಸ್ಥಿಮಿತ ಕಳೆದುಕೊಂಡು ಹೆದ್ದಾರಿಯಲ್ಲಿ ಓಡಲು ಶುರು ಮಾಡಿದ್ದು, ಆತನನ್ನು ಹಿಡಿದ ಸಾರ್ವಜನಿಕರು ಹಗ್ಗದಲ್ಲಿ ಕಟ್ಟಿ ಹಾಕಬೇಕಾದಂತಹ ದುಸ್ಥಿತಿ ನಿರ್ಮಾಣವಾದ ಘಟನೆ ರಾಜಸ್ತಾನದ ಚಿತ್ತೊರಗಢದಲ್ಲಿ ನಡೆದಿದೆ.

ಚಿತ್ತೋರ್‌ಗಢ(Chittorgarh) ಜಿಲ್ಲೆಯ ಬನ್ಸೆನ್‌ನಲ್ಲಿ(Bansen)  ಇಂತಹ ಒಂದು ಪ್ರಕರಣ ಕಂಡುಬಂದಿದೆ. ಇಲ್ಲಿ ಆನ್‌ಲೈನ್ ಗೇಮ್‌ (online game) ವ್ಯಸನಕ್ಕೆ ಒಳಗಾದ ಯುವಕ ಮಾನಸಿಕವಾಗಿ ವಿಕಲಾಂಗ ಅವಸ್ಥೆಗೆ ತಲುಪಿದ್ದಾನೆ.'ಹ್ಯಾಕರ್-ಹ್ಯಾಕರ್', 'ಪಾಸ್ವರ್ಡ್ ಚೇಂಜ್' ಎಂದೆಲ್ಲಾ ಕೂಗುತ್ತಾ ಈತ  ರಸ್ತೆಯಲ್ಲಿ ಓಡಾಡಿದ್ದಾನೆ. ಕೊನೆಗೆ ಯುವಕನನ್ನು ನಿಯಂತ್ರಿಸಲು ಹಗ್ಗದಿಂದ ಕಟ್ಟಿ ಹಾಕಬೇಕಾದ ಮಟ್ಟಕ್ಕೆ ಬಂದಿದೆ. ವಿಷಯ ವಿಕೋಪಕ್ಕೆ ಹೋಗುವುದನ್ನು ಕಂಡ ಮನೆಯವರು ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮನೋವೈದ್ಯರ ಮೇಲ್ವಿಚಾರಣೆಯಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಡರಾತ್ರಿ ಮೊಬೈಲ್ ನಲ್ಲಿ ಗೇಮ್ಸ್ ಆಡುವುದರಿಂದ ನಿದ್ದೆ ಬಾರದೇ ಇರುವುದರಿಂದ ಇಂತಹ ಸಮಸ್ಯೆ ಎದುರಾಗುತ್ತದೆ ಎನ್ನುತ್ತಾರೆ ಮನೋವೈದ್ಯರು(psychiatrist).

ಆನ್‌ಲೈನ್ ಗೇಮ್‌ ಆಡೋರಿಗೆ ಶಾಕ್‌: ಹೊಸ ನಿಯಮ ಜಾರಿ!

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಅಗತ್ಯವಾಗಿದೆ. ಮಕ್ಕಳು, ಹಿರಿಯರು ಎಲ್ಲರೂ ಮೊಬೈಲ್ ಬಳಸುತ್ತಿದ್ದಾರೆ. ಅದರಲ್ಲೂ ಯುವ ಪೀಳಿಗೆ ಹೆಚ್ಚು ಮೊಬೈಲ್ ಸಂಪರ್ಕದಲ್ಲಿದ್ದಾರೆ. ಅನೇಕ ಯುವಕರು ಆನ್‌ಲೈನ್ ಗೇಮ್‌ಗಳ ಬಲೆಗೆ ಬಿದ್ದು ತಮ್ಮ ಜೀವನದ ಜೊತೆ ಆಟವಾಡುತ್ತಿದ್ದಾರೆ. ಮೊಬೈಲ್‌ನಲ್ಲಿ ಆನ್ ಲೈನ್ ಗೇಮ್ ಆಡುವ ಚಟಕ್ಕೆ ಸಿಲುಕಿ ಮಾನಸಿಕವಾಗಿ ಅಸ್ವಸ್ಥರಾಗುತ್ತಿದ್ದಾರೆ. ಆನ್‌ಲೈನ್ ಆಟಗಳಿಂದ ಅನೇಕ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಕೆಲವರು ದೊಡ್ಡ ಅಪರಾಧಗಳನ್ನು ಮಾಡಿದ್ದಾರೆ. ಹಗಲು ರಾತ್ರಿ ಆಟವಾಡುವುದರಿಂದ ಅನೇಕ ಯುವಕರು ತಮ್ಮ ಮೆದುಳಿನ ಸಮತೋಲನವನ್ನೇ ಕಳೆದುಕೊಳ್ಳುತ್ತಿದ್ದಾರೆ.

Online Gaming: ರಾಜ್ಯದಲ್ಲಿ ಆನ್‌ಲೈನ್‌ ಆಟಗಳ ಭವಿಷ್ಯ ಹೇಗಿದೆ?
 

ಚಿತ್ತೋರ್‌ಗಢ್ ಜಿಲ್ಲೆಯ ಬನ್ಸೆನ್ ಪ್ರದೇಶದಲ್ಲಿ ವಾಸಿಸುತ್ತಿರುವ ಇರ್ಫಾನ್ ಅನ್ಸಾರಿ (Irfan Ansari,)ಆನ್‌ಲೈನ್ ಮೊಬೈಲ್ ಗೇಮ್‌ಗಳನ್ನು ಆಡುವ ಚಟ ಹೊಂದಿದ್ದ ಎಂಬ ಮಾಹಿತಿ ಘಟನೆಯ ಬಳಿಕ ಬಹಿರಂಗವಾಗಿದೆ. ಅವರು ಈ ಹಿಂದೆ ಬಿಹಾರದ (Bihar) ಛಾಪ್ರಾದಲ್ಲಿ (Chapra) ವಾಸಿಸುತ್ತಿದ್ದರು. ಕೆಲ ದಿನಗಳ ಹಿಂದೆ ಮನೆಯವರು ಅವರನ್ನು ಇಲ್ಲಿಗೆ ಕರೆ ತಂದಿದ್ದರು. ಕುಟುಂಬದ ಸದಸ್ಯರ ಪ್ರಕಾರ, ಇರ್ಫಾನ್ ಗಂಟೆಗಟ್ಟಲೆ ಮೊಬೈಲ್ ನಲ್ಲಿ ಫ್ರೀ ಫೈರ್ ಗೇಮ್ ಆಡುತ್ತಿದ್ದ. ಮೊಬೈಲ್ ನಲ್ಲಿ ಗೇಮ್ ಆಡುವ ಚಟಕ್ಕೆ ಬಿದ್ದಿದ್ದ ಈತನಿಗೆ ಫೋನ್ ಕಿತ್ತುಕೊಂಡರೆ ಕೋಪ ಬರುತ್ತಿತ್ತು. ಗುರುವಾರ ರಾತ್ರಿಯೂ ಗೇಮ್ ಆಡುತ್ತಿದ್ದ ಆದರೆ ಈ ವೇಳೆ  ಇದ್ದಕ್ಕಿದ್ದಂತೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದಾದ ನಂತರ ಕೋಪದಲ್ಲಿ ಮಾನಸಿಕವಾಗಿ ಕುಗ್ಗಿದಂತೆ ವರ್ತಿಸತೊಡಗಿದ. ಅವನು ಪದೇ ಪದೇ ಹ್ಯಾಕರ್ ಬಂದ ಹ್ಯಾಕರ್ ಬಂದ, ಪಾಸ್‌ವರ್ಡ್(password) ಬದಲಾವಣೆ ಮಾಡು ಮತ್ತು ಐಡಿ ಲಾಕ್ ಮುಂತಾದ ಪದಗಳನ್ನು ಮತ್ತೆ ಮತ್ತೆ ಹೇಳಲು ಪ್ರಾರಂಭಿಸಿದ. ಅವನ ಸ್ಥಿತಿಯಿಂದ ಮನೆಯವರೂ ಬೆಚ್ಚಿಬಿದ್ದು, ಅವನ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರಾದರೂ ಆತ ಸಹಜ ಸ್ಥಿತಿಗೆ ಬಂದಿಲ್ಲ.

ಶುಕ್ರವಾರ, ಆತ ಮತ್ತೆ ಉದಯಪುರ ಹೆದ್ದಾರಿಯಲ್ಲಿ (Udaipur highway) ವಾಹನ ಚಾಲಕರನ್ನು ನಿಲ್ಲಿಸಿ ಐಡಿ ಹ್ಯಾಕ್ ಮಾಡುವ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾನೆ. ಇದರೊಂದಿಗೆ ಅವನ ಸ್ನೇಹಿತರು ಹೇಗಾದರೂ ಅವನನ್ನು ನಿಯಂತ್ರಣಕ್ಕೆ ತಂದು ಅವನನ್ನು ಮಂಚದ ಮೇಲೆ ಹಗ್ಗದಿಂದ ಕಟ್ಟಿದರು. ಈ ಕುರಿತು ಬನ್ಸೇನ್ ಗ್ರಾಮ ಪಂಚಾಯಿತಿಯ ಸರಪಂಚ್ ಕನ್ಹಯ್ಯಾಲಾಲ್ ವೈಷ್ಣವ್ (Kanhayallal Vaishnav) ಮಾತನಾಡಿ, ಮೊಬೈಲ್ ಫೋನ್ ಹಾಳಾಗಿದ್ದರಿಂದ ಯುವಕನ ಮಾನಸಿಕ ಸ್ಥಿತಿ ಹದಗೆಟ್ಟಿದೆ. ಮೊಬೈಲ್ ಅವನ ಕೈಯಲ್ಲಿತ್ತು. ಆ ನಂತರವೂ ಮೊಬೈಲ್ ಯಾರೋ ಕದ್ದಿದ್ದಾರೆ ಎಂದು ಬೇರೆಯವರ ಮೇಲೆ ಆತ ಆರೋಪಿಸಿದ ಎಂದರು. 

ಈ ಬಗ್ಗೆ ಶ್ರೀ ಸಂವಾಲಿಯಾಜಿ (Samwaliaji) ಸರ್ಕಾರಿ ಆಸ್ಪತ್ರೆಯ ಮನೋವೈದ್ಯ ಡಾ.ರಾಜೇಶ್ ಕುಮಾರ್ ಸ್ವಾಮಿ (Dr. Rajesh Kumar Swamy)ಮಾತನಾಡಿ, ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಈ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಅವರ ಆರೋಗ್ಯ ಪರೀಕ್ಷೆ ನಡೆಸಲಾಯಿತು. ಸಾಕಷ್ಟು ನಿದ್ದೆ ಮಾಡದೇ ಇರುವುದರಿಂದ ಮತ್ತು ಹೆಚ್ಚು ಹೊತ್ತು ಮೊಬೈಲ್ ನೋಡುವುದರಿಂದ ಕೆಲವೊಮ್ಮೆ ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಿದರು. ಸದ್ಯ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆತನ ಸ್ಥಿತಿ ಸುಧಾರಿಸುತ್ತಿದೆ.

Follow Us:
Download App:
  • android
  • ios