ಪತ್ನಿ ಚೆನ್ನಾಗಿ ಅಡುಗೆ ಮಾಡುವುದಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಕೌಟುಂಬಿಕ ನ್ಯಾಯಾಲಯವು ವಿಚ್ಛೇದನವನ್ನು ಮಾನ್ಯ ಮಾಡಿತ್ತು. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪತ್ನಿ ಸೇವಕಿಯಲ್ಲ, ಜೀವನ ಸಂಗಾತಿ ಎಂದು ಹೇಳಿದ್ದು, ಮನೆಗೆಲಸಗಳಲ್ಲಿ ಪತಿಯೂ ಸಮಾನವಾಗಿ ಪಾಲ್ಗೊಳ್ಳಬೇಕು ಎಂದು ಮಹತ್ವದ ಆದೇಶ ನೀಡಿದೆ.

ಅಡುಗೆ ಮಾಡುವುದು, ಸಂಪೂರ್ಣ ಮನೆಯನ್ನು ಚೆನ್ನಾಗಿ ಇರಿಸುವುದು, ಮನೆ ಸರಿ ಇಡುವುದು, ಸಂಸಾರವನ್ನು ನಿಭಾಯಿಸುವುದು, ಎಲ್ಲರನ್ನೂ ಅಕ್ಕರೆಯಿಂದ ನೋಡಿಕೊಳ್ಳುವುದು.... ಹೀಗೆ ಮಹಿಳೆಯರ ಮೇಲಿನ ಜವಾಬ್ದಾರಿಗಳಿಗೆ ಮಿತಿಯೇ ಇಲ್ಲ. ಆಕೆ ಹೊರಗಡೆ ಹೋಗಿ ದುಡಿಯುತ್ತಿರಲಿ, ಗೃಹಿಣಿಯೇ ಆಗಿರಲಿ... ಒಂದಿಷ್ಟು ಕಾಯಂ ಜವಾಬ್ದಾರಿಗಳು ಅವಳಿಗೆ ಮೀಸಲು. ಏಕೆಂದರೆ, ಗಂಡು ಮಕ್ಕಳಿಗೆ ನೀನು ಮುಂದೆ ಹೀಗೆ ಮಾಡಬೇಕು ಎಂದು ಅವರ ಮನೆಯಲ್ಲಿ ಹೇಳಿಕೊಟ್ಟಿಯೇ ಇರುವುದಿಲ್ಲ. ಆದರೆ ಮಗಳು ಹುಟ್ಟಿದರೆ ಮಾತ್ರ, ಅವಳಿಗೆ ಬುದ್ಧಿ ಬರುತ್ತಿದ್ದಂತೆಯೇ ಗಂಡನ ಮನೆಯಲ್ಲಿ ಏನೆಲ್ಲಾ ಕರ್ತವ್ಯ ನಿಭಾಯಿಸಬೇಕು ಎಂದು ಹೇಳಿಕೊಡುವ ರೂಢಿ ಇದೆ. ಇದೀಗ ಕಾಲ ಬದಲಾದರೂ, ಇಂಥ ಮನಸ್ಥಿತಿಗಳು ಅದೆಷ್ಟೋ ಮನೆಗಳಲ್ಲಿ ಇಂದಿಗೂ ಇದೆ.

Add Asianetnews Kannada as a Preferred SourcegooglePreferred

ಡಿವೋರ್ಸ್​ಗೆ ಅರ್ಜಿ

ಇಂಥ ಮನಸ್ಥಿತಿಗೆ ತಕ್ಕಂತೆ ಕೆಲವೊಮ್ಮೆ ಕೋರ್ಟ್​ಗಳೂ ವರ್ತಿಸುವುದು, ಕೋರ್ಟ್​ಗಳಿಂದ ಬರುವ ಆದೇಶಗಳು ಇನ್ನಷ್ಟು ಸಮಸ್ಯೆಗಳನ್ನು ಜಟಿಲ ಮಾಡುವುದು ಇದೆ. ಅಂಥದ್ದೇ ಒಂದು ಕೆಳಹಂತದ ಕೋರ್ಟ್​ನ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಗೆ ಸುಪ್ರೀಂಕೋರ್ಟ್​ ಅಸಮಾಧಾನ ಹೊರಹಾಕಿದೆ. ಪತ್ನಿ ಅಡುಗೆ ಚೆನ್ನಾಗಿ ಮಾಡದೇ ಕ್ರೌರ್ಯ ಎಸಗುತ್ತಿದ್ದಾಳೆ ಎಂದು ಪತಿರಾಯನೊಬ್ಬ ಡಿವೋರ್ಸ್​ಗೆ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ಕೋರ್ಟ್​ ಒಂದು ಮಾನ್ಯ ಮಾಡಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಹಾಗೂ ಸಂದೀಪ್‌ ಮೆಹ್ತಾ ಅವರಿದ್ದ ಪೀಠ ಈಗ ಚಾಟಿ ಬೀಸಿದೆ.

ಅವಳು ಸೇವಕಿಯಲ್ಲ

ಪತ್ನಿಯು ಕೇವಲ ಅಡುಗೆ ಮತ್ತು ಮನೆಗೆಲಸಕ್ಕಾಗಿ ಇರುವ ಸೇವಕಿಯಲ್ಲ, ಆಕೆ ಜೀವನ ಸಂಗಾತಿ ಎನ್ನುವುದು ನೆನೆಪಿರಲಿ ಎಂದಿದೆ ಕೋರ್ಟ್​. ಅವಳು ಅದು ಮಾಡಿಲ್ಲ, ಇದು ಮಾಡಿಲ್ಲ, ಅಡುಗೆ ಮಾಡಿಲ್ಲ ಎಂದು ಕಂಪ್ಲೇಂಟ್​ ಮಾಡುವುದಲ್ಲ. ಬದಲಿಗೆ ಪತಿಯೂ ಅಡುಗೆ, ಸ್ವಚ್ಛತೆ ಸೇರಿದಂತೆ ಮನೆಗೆಲಸಗಳಲ್ಲಿ ಪತ್ನಿಯಷ್ಟೇ ಸಮಾನವಾಗಿ ಪಾಲ್ಗೊಳ್ಳಬೇಕು ಎಂದಿರುವ ನ್ಯಾಯಮೂರ್ತಿಗಳು ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಕ್ರೂರತೆಯ ಆಧಾರದ ಮೇಲೆ ಡಿವೋರ್ಸ್​ ಕೋರುವುದು ಅತ್ಯಂತ ಶೋಚನೀಯ ಎಂದಿದೆ!

ಸಮನಾಗಿ ಪಾಲ್ಗೊಳ್ಳಿ

ಅಡುಗೆ, ಸ್ವಚ್ಛತೆ, ಬಟ್ಟೆ ಒಗೆಯುವುದು.. ಹೀಗೆ ಎಲ್ಲ ಕೆಲಸಗಳಲ್ಲೂ ಪತಿ ಸಮಾನವಾಗಿ ಪಾಲ್ಗೊಳ್ಳಬೇಕು. ಇಂದಿನ ಕಾಲ ಬೇರೆ. ಗಂಡನಾದವನು ಮನೆಗೆಲಸದವಳನ್ನು ಮದುವೆಯಾಗಿರುವುದಿಲ್ಲ, ಬದಲಾಗಿ ಜೀವನ ಸಂಗಾತಿಯನ್ನು ಮದುವೆಯಾಗಿರುತ್ತಾನೆ ಎನ್ನುವುದನ್ನು ತಿಳಿದುಕೊಳ್ಳಿ. ಆಕೆಯನ್ನು ಮನೆಗೆಲಸದವಳಂತೆ ಕಾಣದೆ, ಬಾಳ ಸಂಗಾತಿಯಾಗಿ ಗೌರವಿಸಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.