ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶತಾಯುಷಿ ಯೋಗ ಗುರು ಸ್ವಾಮಿ ಶಿವಾನಂದರು 128ನೇ ವಯಸ್ಸಿನಲ್ಲಿ ವಾರಣಾಸಿಯಲ್ಲಿ ನಿಧನರಾಗಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶತಾಯುಷಿ ಯೋಗ ಗುರು ಸ್ವಾಮಿ ಶಿವಾನಂದ ಇಂದು ನಿಧನರಾಗಿದ್ದಾರೆ. ಅವರಿಗೆ 128 ರ್ಷ ವಯಸ್ಸಾಗಿತ್ತು. ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿರಂತರ ಯೋಗ ಮಾಡುತ್ತಲೇ ಅವರು ತಮ್ಮ ಆರೋಗ್ಯವನ್ನು ಬಹಳ ಕಾಳಜಿಯಿಂದ ರಕ್ಷಿಸಿಕೊಂಡು ಬಂದಿದ್ದರು. ಮೂರು ವರ್ಷದ ಹಿಂದೆ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ವಾರಾಣಾಸಿಯ ಬಿಹೆಚ್‌ಯು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಶನಿವಾರ ರಾತ್ರಿ ಅವರು ನಿಧನರಾಗಿದ್ದಾರೆ.
ಅವರು 1897ರಲ್ಲಿ ಬ್ರಿಟಿಷ್ ಇಂಡಿಯಾ ಸಮಯದಲ್ಲಿ ಭಾರತದ ಭಾಗವಾಗಿದ್ದ ಸಿಲ್ಹೆಟ್ ಜಿಲ್ಲೆಯಲ್ಲಿ(ಇಂದಿನ ಬಾಂಗ್ಲಾದೇಶ) ಆಗಸ್ಟ್ 8ರಂದು ಜನಿಸಿದ್ದರು. 6ರ ಹರೆಯದಲ್ಲೇ ಇವರು ತಮ್ಮ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿಯೇ ಬೆಳೆದರು. ಎಳೆಯ ಪ್ರಾಯದಲ್ಲೇ ಪೋಷಕರನ್ನು ಕಳೆದುಕೊಂಡ ಅವರನ್ನು ಪೋಷಕರ ಅಂತಿಮ ಸಂಸ್ಕಾರದ ನಂತರ ಪಶ್ಚಿಮ ಬಂಗಾಳದ ನಬಾದ್ವೀಪ್‌ನಲ್ಲಿರುವ ಆಶ್ರಮಕ್ಕೆ ಕರೆತರಲಾಗಿತ್ತು. ಅಲ್ಲಿ ಅವರು ಗುರು ಓಂಕಾರನಂದ ಗೋಸ್ವಾಮಿ ಅವರ ಆರೈಕೆಯಲ್ಲಿ ಬೆಳೆದರು. ಯಾವುದೇ ಶಾಲಾಭ್ಯಾಸವಿಲ್ಲದೇ ಅವರಿಗೆ ಎಳೆಯ ಪ್ರಾಯದಲ್ಲೇ ಯೋಗ ಸೇರಿದಂತೆ ಎಲ್ಲಾ ಪ್ರಾಯೋಗಿಕ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ನೀಡಲಾಯಿತು. ಸ್ವಾಮಿ ಶಿವಾನಂದರು ಅಂದಿನ ಕಾಲದಲ್ಲಿ ಕುಷ್ಠರೋಗ ಪೀಡಿತರಾಗಿದ್ದ 400 ರಿಂದ 600 ಭಿಕ್ಷುಕರನ್ನು ಅವರ ಗುಡಿಸಲುಗಳಲ್ಲಿ ಭೇಟಿ ಮಾಡಿ ಸೇವೆ ಸಲ್ಲಿಸಿದ್ದರು ಎಂಬ ಮಾಹಿತಿ ಇದೆ. ಅಂದಿನ ಕಾಲದಲ್ಲಿ ಕುಷ್ಠರೋಗಿಗಳನ್ನು ತುಂಬಾ ನಿಕೃಷ್ಠವಾಗಿ ಕಾಣಲಾಗುತ್ತಿತ್ತು.
2019 ರಲ್ಲಿ ಅವರಿಗೆ ಬೆಂಗಳೂರಿನಲ್ಲಿ ಯೋಗ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 2022 ರಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಯೋಗ ಕ್ಷೇತ್ರಕ್ಕೆ ಅವರು ನೀಡಿದ ಅಪಾರ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಿದ್ದರು. 2025ರ ಮಹಾ ಕುಂಭಮೇಳದ ಸಮಯದಲ್ಲಿ ಸ್ವಾಮಿ ಶಿವಾನಂದ ಸರಸ್ವತಿ ಅವರು ಕಳೆದ ನೂರು ವರ್ಷಗಳಿಂದಲೂ ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಕೆಲ ಮಾಧ್ಯಮ ವರದಿಗಳು ಹೇಳಿದ್ದವು. ಸ್ವಾಮಿ ಶಿವಾನಂದ ಅವರ ನಿಧನಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ಯಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಆದಿತ್ಯನಾಥ್, ಯೋಗ ಕ್ಷೇತ್ರದಲ್ಲಿ ಅಪ್ರತಿಮ ಕೊಡುಗೆ ನೀಡಿದ ಕಾಶಿಯ ಹೆಸರಾಂತ ಯೋಗ ಗುರು 'ಪದ್ಮಶ್ರೀ' ಸ್ವಾಮಿ ಶಿವಾನಂದ್ ಜಿ ಅವರ ನಿಧನವು ಅತ್ಯಂತ ದುಃಖಕರವಾಗಿದೆ. ಅವರಿಗೆ ವಿನಮ್ರ ಶ್ರದ್ಧಾಂಜಲಿ! ನಿಮ್ಮ ಆಧ್ಯಾತ್ಮಿಕ ಅಭ್ಯಾಸ ಮತ್ತು ಯೋಗ ಜೀವನವು ಇಡೀ ಸಮಾಜಕ್ಕೆ ಒಂದು ದೊಡ್ಡ ಸ್ಫೂರ್ತಿಯಾಗಿದೆ. ನೀವು ನಿಮ್ಮ ಇಡೀ ಜೀವನವನ್ನು ಯೋಗದ ವಿಸ್ತರಣೆಗೆ ಮುಡಿಪಾಗಿಟ್ಟಿದ್ದೀರಿ. ಅಗಲಿದ ಆತ್ಮಕ್ಕೆ ಮೋಕ್ಷ ನೀಡಲಿ ಮತ್ತು ಅವರ ದುಃಖಿತ ಅನುಯಾಯಿಗಳಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ನಾನು ಬಾಬಾ ವಿಶ್ವನಾಥರನ್ನು ಪ್ರಾರ್ಥಿಸುತ್ತೇನೆ ಎಂದು ಸಿಎಂ ಆದಿತ್ಯನಾಥ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.


